ಜಗ್ಗದ ರೈತ ಹೋರಾಟ; ರೈತರನ್ನು ದಮನಿಸಲು ತಂತ್ರ ಎಣೆಯುತ್ತಿದೆಯೇ BJP ಸರ್ಕಾರ?

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ನೀತಿಗಳ ವಿರುದ್ಧ ರೈತರ ಆಕ್ರೋಶ ದಿನದಿಂದ ದಿನಕ್ಕೆ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಸತತ 41 ದಿನಗಳಿಂದ ರೈತರು ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕೊರೊನಾ ಸೋಂಕು, ಚಳಿ, ಮಳೆಗೂ ಜಗ್ಗದೆ ರೈತರು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ ನಿನ್ನೆ (ಸೋಮವಾರ) ನಡೆದ 7ನೇ ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದೆ. ರೈತರು ಸುಪ್ರೀಂ ಕೋರ್ಟ್‌ನಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ.

ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆ ಪ್ರಶ್ನಿಸಿ ಹಾಗೂ ಅದಕ್ಕೆ ಸಂಬಂಧಿಸಿ ಒಟ್ಟು ಎಂಟು ಅರ್ಜಿಗಳು ಸಲ್ಲಿಕೆಯಾಗಿದೆ. ಮಂಗಳವಾರ(ಇಂದು) ಈ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ. ಸು‌ಪ್ರೀಂ ಕೋರ್ಟ್‌ ಅರ್ಜಿಗಳಲ್ಲಿ ರೈತ ಸಂಘಟನೆಗಳನ್ನು ಕೂಡಾ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಹೇಳಿತ್ತು. ಆದರೆ ರೈತ ಸಂಘಟನೆಗಳು ಇದನ್ನು ನಿರಾಕರಿಸಿದ್ದು, ’ನಮಗೆ ಕಾನೂನು ಪರಿಹಾರ ಬೇಕಿಲ್ಲ, ಸರ್ಕಾರದಿಂದ ಪರಿಹಾರ ಬೇಕಿದೆ’ ಎಂದು ಹೇಳಿದ್ದವು.

ರೈತರು ಪ್ರತಿಭಟನೆ ನಡೆಸಿದ ದಿನದಿಂದಲೂ ಅವರೊಂದಿಗೆ ಕಠಿಣವಾಗಿ ವರ್ತಿಸಿದ್ದ ಒಕ್ಕೂಟ ಸರ್ಕಾರ, ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ತುಸು ಮಂಡಿಯೂರತೊಡಗಿದೆ. ಮೊದಲಿಗೆ ರೈತರ ಮೇಲೆ ಅಶ್ರುವಾಯು, ಜಲಫಿರಂಗಿ, ಲಾಠಿ ಚಾರ್ಜ್ ಮಾಡಿ ತನ್ನ ದರ್ಪ ಮೆರೆದಿತ್ತು. ಆದರೆ ನಂತರದಲ್ಲಿ ಈ ವಿಧಾನವನ್ನು ಕೈಚೆಲ್ಲಿ ಬೇರೆಯೆ ರೀತಿಯಲ್ಲಿ ತನ್ನ ತಂತ್ರವನ್ನು ಪ್ರಾರಂಭಿಸಿತ್ತು. ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು, ಭಯೋತ್ಪಾದಕರು, ಪ್ರತ್ಯೇಕವಾದಿಗಳು ಎಂದು ಸರ್ಕಾರದ ಸಂಸದರೂ, ಶಾಸಕರೂ, ಬಿಜೆಪಿಯ ನಾಯಕರೂ ಹೇಳಿದ್ದರು.

ಇದನ್ನೂ ಓದಿ:  ಬಿಹಾರ: ನಿತೀಶ್‌ ಸರ್ಕಾರಕ್ಕೆ ಲಾಲು ವಿಲನ್‌? BJP ಮೈತ್ರಿ ಸರ್ಕಾರಕ್ಕೆ ಸಂಚಕಾರ?

ಯಾವುದೇ ಪ್ರತಿಭಟನೆಗೂ ಜಗ್ಗುವುದಿಲ್ಲ ಎಂಬಂತಿದ್ದ ಸರ್ಕಾರ ಆರನೇ ಸುತ್ತಿನ ಮಾತುಕತೆಯಲ್ಲಿ ಎರಡು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದೆ. ಜೊತೆಗೆ ಆರನೇ ಸುತ್ತಿನ ಮಾತುಕತೆಯ ಸಮಯದಲ್ಲಿ ಸಚಿವರು ರೈತರೊಂದಿಗೆ ಜೊತೆಗೂಡಿ ಊಟ ಮಾಡಿದ್ದರು. ಏಳನೇ ಸುತ್ತಿನಲ್ಲಿ ಮಾತುಕತೆಯ ಸಮಯದಲ್ಲೂ ಸಭೆಯ ಪ್ರಾರಂಭಕ್ಕೆ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ದಾಂಜಲಿಯನ್ನೂ ಕೋರಿತ್ತು.

ಅದಾಗ್ಯೂ ಏಳನೇ ಸುತ್ತಿನ ಮಾತುಕತೆಗೂ ಮುನ್ನ ಪ್ರತಿಭಟನಾ ನಿರತ ರೈತರ ಮೇಲೆ ಆಶ್ರುವಾಯು ದಾಳಿ ನಡೆಸಿದೆ. ಆರನೇ ಸುತ್ತಿನಲ್ಲಿ ರೈತರೊಂದಿಗೆ ಊಟ ಮಾಡಿದ್ದ ಸಚಿವರು ಏಳನೇ ಸುತ್ತಿನ ಮಾತುಕತೆಯ ಸಮಯದಲ್ಲಿ ರೈತರೊಂದಿಗೆ ಊಟಕ್ಕೆ ಸೇರಲಿಲ್ಲ. ಅಲ್ಲದೆ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಲು ಆಗುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದೆ.

Farmers protest: Agriculture minister Tomar again indicates govt will not roll back farm laws | India News - Times of India

ಪ್ರತಿಭಟನೆಗಳನ್ನು ಬಲಪ್ರಯೋಗಿಸಿಯೇ ಬಗ್ಗಿಸಿ ಅಭ್ಯಾಸವಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಇನ್ನೇನೋ ತಂತ್ರ ಹೂಡುತ್ತಿದೆ ಎಂಬ ಸಂಶಯ ವ್ಯಾಪಕವಾಗಿದೆ. ಆದರೆ ಬೇರೆ ಹೋರಾಟಗಳನ್ನು ಧಮನಿಸಿದಂತೆ ಈ ಆಂದೋಲನವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಭಟನೆಯ ಭಾಗವಾಗಿರುವ ಎಲ್ಲಾ ರೈತ ಸಂಘಟನೆಗಳು ಒಗ್ಗಟ್ಟಾಗಿದೆ. ಇವರನ್ನು ಒಡೆಯಲು ಆರಂಭದಲ್ಲಿ ಸರ್ಕಾರ ಪ್ರಯತ್ನಿಸಿತ್ತಾದರೂ ಅದು ಯಶಸ್ವಿಯಾಗಿಲ್ಲ. ಪ್ರತಿಭಟನೆಯ ದಿನಗಳು ಹೆಚ್ಚುತ್ತಿದ್ದಂತೆ ರೈತ ಸಂಘಟನೆಗಳ ಒಗ್ಗಟ್ಟು ಗಟ್ಟಿಯಾಗುತ್ತಲೆ ಇದೆ.

ಈ ನಡುವೆ ಏಳನೇ ಮಾತುಕತೆ ವಿಫಲವಾದರೆ ಟ್ರಾಕ್ಟರ್‌ ರ್‍ಯಾಲಿ ನಡೆಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ, ಕೊರೆಯುತ್ತಿರುವ ದೆಹಲಿಯ ಚಳಿ, ಮಳೆಗೆ ಜಗ್ಗದೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಒಕ್ಕೂಟ ಸರ್ಕಾರ ಎಂಟನೇ ಎಂಟನೇ ಸುತ್ತಿನ ಮಾತುಕತೆ ಜನವರಿ 8 ಕ್ಕೆ ನಿಗದಿಯಾಗಿದೆ. ರೈತರು ತಮ್ಮ ನಿಲುವಲ್ಲಿ ಗಟ್ಟಿಯಾಗಿದ್ದು, ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ವಾಪಾಸು ಪಡೆಯುವುದಿಲ್ಲ ಎಂದು ಅಚಲ ನಿರ್ಧಾರಕ್ಕೆ ಬಂದಿದ್ದಾರೆ.


ಇದನ್ನೂ ಓದಿ: ರೈತರ ದಾಳಿಗೆ ಬೆದರಿದ ರಿಲಯನ್ಸ್‌: ಗುತ್ತಿಗೆ ಕೃಷಿ ಮಾಡುವುದಿಲ್ಲ ಎಂದು ಕೋರ್ಟ್‌ ಮೊರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights