ಮಕ್ಕಳೆದುರು ಹೆಂಡತಿ ಮತ್ತು ಅತ್ತೆ ಕೊಲೆ ಮಾಡಿ ದೇಹ ಕತ್ತರಿಸಿದ ವ್ಯಕ್ತಿಯನ್ನು ಹಸ್ತಾಂತರಿಸುವಂತೆ ಸ್ಥಳೀಯರ ಆಕ್ರೋಶ!
ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಅತ್ತೆಯನ್ನು ಕೊಂದು ತನ್ನ ಮಕ್ಕಳೆದುರು ಅವರ ದೇಹವನ್ನು ಕತ್ತರಿಸಿ ತಾನೂ ವಿಷ ಸೇವಿಸಿದ ಭೀಕರ ಘಟನೆ ತ್ರಿಪುರದ ಧಲೈ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ವೈವಾಹಿಕ ಜಗಳಗಳಿಂದಾಗಿ ವಿಚ್ಚೇದನಕ್ಕೆ ಬಯಸಿದ್ದ ಹೆಂಡತಿ ಗಂಡನನ್ನು ತೊರೆದು ತಾಯಿ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಂಗಿದ್ದಳು. ವೈವಾಹಿಕ ಮನಸ್ತಾಪಗಳೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ತ್ರಿಪುರ ರಾಜಧಾನಿ ಅಗರ್ತಲಾದಿಂದ 7 ಕಿ.ಮೀ ದೂರದಲ್ಲಿರುವ ಪಶ್ಚಿಮ ತ್ರಿಪುರದ ಹಪಾನಿಯಾ ನಿವಾಸಿ ಎಂದು ಗುರುತಿಸಲಾಗಿದೆ. ಅದೇನಾಯ್ತೋ ಏನೋ ಗೊತ್ತಿಲ್ಲ. ಅಂದು ಅತ್ತೆ ಮನೆಗೆ ಬಂದ ಆರೋಪಿ ತನ್ನ ಹೆಂಡತಿ ಹಾಗೂ ಅತ್ತೆಯನ್ನು ಕೊಲೆಗೈದು ನಂತರ ಅವರ ದೇಹವನ್ನು ಮಕ್ಕಳೆದುರು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ಘಟನೆಯಿಂದಾಗಿ ಅಘಾತಕ್ಕೊಳಗಾಗಿದ್ದ ಮಕ್ಕಳು ಅಳುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ರಕ್ತದ ಮಡಿಲಿನಲ್ಲಿ ಇಬ್ಬರು ಮಹಿಳೆಯರು ಬಿದ್ದ ದೃಶ್ಯ ಕಂಡು ಬಂದಿದೆ. ಆರೋಪಿ ವ್ಯಕ್ತಿ ಆತ ತನ್ನ ಅಳಿಯಂದಿರ ಮನೆಯಲ್ಲಿ ವಿಷ ಸೇವಿಸಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿ ಅಪಾಯದಿಂದ ಪಾರಾಗಿದ್ದಾನೆ.
“ನಾವು ಆ ವ್ಯಕ್ತಿಯನ್ನು ಬಂಧಿಸಿದ್ದೇವೆ ಮತ್ತು ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದೇವೆ. ಅವರ ದೇಹದಲ್ಲಿ ವಿಷದ ಕುರುಹುಗಳು ಕಂಡುಬಂದಿವೆ, ಆದರೆ ಆತ ಅಪಾಯದಿಂದ ಹೊರಗುಳಿದಿದ್ದಾನೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದಿಲ್ಲ, ಏಕೆಂದರೆ ನಾವು ಅವನನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ” ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಆಶಿಶ್ ದಾಸ್‌ಗುಪ್ತಾ ಹೇಳಿದ್ದಾರೆ.
ಅಗರ್ತಲಾದ ಜಿಬಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳನ್ನು ಧಲೈ ಮಕ್ಕಳ ಕಲ್ಯಾಣ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯ ಪತ್ನಿ ಮತ್ತು ಮಕ್ಕಳು ಕಳೆದ ನಾಲ್ಕು ತಿಂಗಳಿನಿಂದ ಅಜ್ಜಿಯ ಮನೆಯಲ್ಲಿ ತಂಗಿದ್ದರು. ಕೊಲೆಗೆ ವೈವಾಹಿಕ ಮನಸ್ತಾಪಗಳೇ ಕಾರಣವಾಗಿದ್ದು ತನಿಖೆಯಿಂದ ಇನ್ನಷ್ಟು ವಿಚಾರಗಳು ತಿಳಿಯಲಿವೆ ಎಂದು ಶ್ರೀ ದಾಸ್‌ಗುಪ್ತಾ ಹೇಳಿದರು.
ಈ ಘಟನೆಯಿಂದ ಸ್ಥಳೀಯರು ಕೋಪಗೊಂಡಿದ್ದು, ಆರೋಪಿಯನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ. ಜನಸಂದಣಿಯನ್ನು ಶಾಂತಗೊಳಿಸಲು ತ್ರಿಪುರ ರಾಜ್ಯ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

