ರಾಜಕೀಯವನ್ನು ಬದಿಗೊತ್ತಿ, ಸಾರ್ವಜನಿಕರಿಗೆ ಸಹಾಯ ಮಾಡಿ: ಕಾಂಗ್ರೆಸ್‌ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಕರೆ!

ದೇಶದಲ್ಲಿ ಕೊರೊನಾ ತೀವ್ರವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್‌ ಕೊರತೆಯಿಂದಾಗಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯವನ್ನು ಬದಿಗೊತ್ತಿ, ಸಾರ್ವಜನಿಕರಿಗೆ ಸಹಾಯ ಮಾಡುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ, ’ವ್ಯವಸ್ಥೆಯು ವಿಫಲವಾಗಿದೆ, ಆದ್ದರಿಂದ ಜನ್ ಕಿ ಬಾತ್ ಮಾಡುವುದು ಮುಖ್ಯವಾಗಿದೆ” ಎಂದು, ಪ್ರಧಾನಿಯವರ ಮನ್‌ ಕಿ ಬಾತ್ ಅನ್ನು ಟೀಕಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,767 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದಾಖಲೆಯ 3,49,691 ಹೊಸ ಕೊರೊನಾ ಸೋಂಕು ಪ್ರಕರಣಗಳನ್ನು ದಾಖಲಿಸಿದೆ.

“ವ್ಯವಸ್ಥೆ ವಿಫಲವಾಗಿದೆ. ಜನ್ ಕಿ ಬಾತ್ ಮಾಡುವುದು ಮುಖ್ಯವಾಗಿದೆ. ಈ ಬಿಕ್ಕಟ್ಟಿನಲ್ಲಿ, ದೇಶಕ್ಕೆ ಜವಾಬ್ದಾರಿಯುತ ನಾಗರಿಕರು ಬೇಕಾಗಿದ್ದಾರೆ. ಎಲ್ಲಾ ರಾಜಕೀಯ ಕೆಲಸಗಳನ್ನು ತೊರೆದು, ಸಾರ್ವಜನಿಕರಿಗೆ ಎಲ್ಲಾ ಸಹಾಯವನ್ನು ನೀಡಿ, ನಮ್ಮ ದೇಶದ ಜನರ ನೋವನ್ನು ಕಡಿಮೆ ಮಾಡಿ ಎಂದು ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ವಿನಂತಿ ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ಇದು ಕಾಂಗ್ರೆಸ್ ಕುಟುಂಬದ ಧರ್ಮ” ಎಂದು ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ಹಂತಗಳ ಚುನಾವಣೆ ಇರುವಾಗಲೇ ಕೊರೊನಾ ಕಾರಣದಿಂದ ಏಪ್ರಿಲ್ 18 ರಂದು, ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದಲ್ಲಿ ನಡೆಯಲಿದ್ದ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ರದ್ದುಗೊಳಿಸಿದ್ದರು.

“ಕೊರೊನಾ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ಸ್ಥಗಿತಗೊಳಿಸುತ್ತಿದ್ದೇನೆ. ಪ್ರಸ್ತುತ ಸಂದರ್ಭಗಳಲ್ಲಿ ದೊಡ್ಡ ಸಾರ್ವಜನಿಕ ರ್‍ಯಾಲಿಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸುವಂತೆ ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

Read Also: ಸಂದರ್ಶನ: ಸಲಹಾ ಸಮಿತಿ ಮಾತು ಕೇಳದೇ ಎಡವಿತು ಸರ್ಕಾರ; ತಪ್ಪೊಪ್ಪಿಕೊಂಡ ಸಚಿವ ಸುಧಾಕರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights