ಕೊರೊನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು; ಸುಧಾಕರ್‌ ರಾಜೀನಾಮೆ ನೀಡಬೇಕು: ಕಾಂಗ್ರೆಸ್‌ ಆಗ್ರಹ

ಕೊರೊನಾ ಸೋಂಕಿನಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸುತ್ತಲೇ ಇದೆ. ಇದೀಗ ಮತ್ತೆ ಬಿಜೆಪಿ ಸರ್ಕಾರ ವಿರುದ್ದ ಹರಿಹಾಯ್ದಿರುವ ಕಾಂಗ್ರೆಸ್‌, ಕೊರೊನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು. ಸುಧಾಕರ್‌ ಅವರು ಸಚಿವ ಸ್ಥಾನದಲ್ಲಿರಲು ನಾಲಾಯಕ್‌, ಅವರಿಂದ ಸಿಎಂ ಬಿಎಸ್‌ವೈ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದೆ.

ಕೊರೊನಾ ನಿಯಂತ್ರಣದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಮತ್ತೆ ಮತ್ತೆ ಹೇಳುತ್ತೇವೆ, ಕರೋನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು. ಅವರ ಸುಳ್ಳು, ಭ್ರಷ್ಟಾಚಾರ, ನಿರ್ಲಕ್ಸ್ಯ, ನಿರ್ಲಜ್ಜತನವೇ ಇಂದಿನ ಈ ಎಲ್ಲಾ ಅನಾಹುತಗಳಿಗೆ ಕಾರಣ. ಜನ ಸಾಯುತ್ತಿದ್ದರೂ ಕರುಣೆ ಇಲ್ಲದಂತೆ ಸುಳ್ಳಿನ ಬಂಡತನದ ಪ್ರಭು ಚೌಹಾಣ್‌ರಂತವರ ಮೂಲಕ ರಾಜ್ಯವನ್ನು ಸ್ಮಶಾನ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಯಡಿಯೂರಪ್ಪಅವರೇ ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಾಪೆಯ ಕೆಳಗೆ ನುಸುಳುವ ಕೆಲಸ ಮಾಡಿದ್ದೀರೆಂದು ಗೊತ್ತಿದೆ. ಅಧಿಕೃತವಾಗಿ ಘೋಷಿಸಿದರೆ ನೆರವು ನೀಡಬೇಕಾದ ಅನಿವಾರ್ಯ ಬರುತ್ತದೆಂದು ಅನಧಿಕೃತ ಲಾಕ್‌ಡೌನ್ ಜಾರಿಗೊಳಿಸಿದಿರಿ. ಆದರೆ ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಚಾಲಕರು, ದಿನಗೂಲಿ ನೌಕರರು ಉಪವಾಸ ಮಲಗುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಅನಧಿಕೃತ ಲಾಕ್‌ಡೌನ್ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪ್ರತಿ ಅರ್ಹ ಕುಟುಂಬಕ್ಕೆ ಕನಿಷ್ಠ ₹10 ಸಾವಿರ ಆರ್ಥಿಕ ನೆರವು ನೀಡಿ. ಅನ್ನಭಾಗ್ಯ ಅಕ್ಕಿಯನ್ನು 10 ಕೆ.ಜಿ ನೀಡಿ. ಸಣ್ಣ ವ್ಯಾಪಾರಿಗಳು, ಚಾಲಕರಿಗೆ ಪ್ಯಾಕೇಜ್ ನೀಡಿ. ಎಂಎಸ್‌ಎಂಇ ಗಳಿಗೆ ಅಗತ್ಯ ನೆರವು ನೀಡಿ ಉದ್ಯೋಗ ನಷ್ಟವಾಗದಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದೆ.

ಸಚಿವ ಸುಧಾಕರ್ ಅವರು‌ ಜವಾಬ್ದಾರಿ ನಿರ್ವಹಿಸುವುದರಲ್ಲಿ ಸೋತಿದ್ದಾರೆ. ಕರೋನಾ ಸೋಂಕು ನಿಯಂತ್ರಿಸುವುದರತ್ತ ಗಮನಿಸದೆ ಸಿಡಿ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಮುಳುಗಿ ಈಗ ಸುಳ್ಳುಗಳ ಸಮರ್ಥನೆಗೆ ಇಳಿದಿದ್ದಾರೆ. ಸಚಿವ ಸ್ಥಾನದಲ್ಲಿರಲು ಅವರು ನಾಲಾಯಕ್, ಅವರಿಂದ ಸಿಎಂ ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ಪಡೆದು ಜನರನ್ನು ರಕ್ಷಿಸಿ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಇದನ್ನೂ ಓದಿ: ಸಂದರ್ಶನ: ಸಲಹಾ ಸಮಿತಿ ಮಾತು ಕೇಳದೇ ಎಡವಿತು ಸರ್ಕಾರ; ತಪ್ಪೊಪ್ಪಿಕೊಂಡ ಸಚಿವ ಸುಧಾಕರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights