45,500 ವರ್ಷಗಳ ಹಿಂದೆ ಮಾಡಿದ ವಿಶ್ವದ ಅತ್ಯಂತ ಹಳೆಯ ಗುಹೆ ಚಿತ್ರಕಲೆ ಪತ್ತೆ!

ಇಂಡೋನೇಷ್ಯಾದ ಪುರಾತತ್ತ್ವಜ್ಞರು ವಿಶ್ವದ ಅತ್ಯಂತ ಹಳೆಯ ಗುಹೆ ವರ್ಣಚಿತ್ರವನ್ನು ಕಂಡುಹಿಡಿದಿದ್ದಾರೆ. ಇದು ಕನಿಷ್ಠ 45,500 ವರ್ಷಗಳ ಹಿಂದೆ ಮಾಡಿದ ಕಾಡು ಹಂದಿಯ ಚಿತ್ರವಾಗಿದೆ.

ಈ ಚಿತ್ರಕಲೆ ಲಿಯಾಂಗ್ ಟೆಡಾಂಗ್ನೆ ಗುಹೆಯಲ್ಲಿ ಕಂಡುಬಂದಿದೆ. ಈ ಗುಹೆ ಸುಣ್ಣದ ಬಂಡೆಗಳಿಂದ ಆವೃತವಾದ ದೂರದ ಕಣಿವೆಯಲ್ಲಿದ್ದು 2017 ರಲ್ಲಿ ಸುಲಾವೆಸಿ ದ್ವೀಪದಲ್ಲಿ ಡಾಕ್ಟರೇಟ್ ವಿದ್ಯಾರ್ಥಿ ಬಸ್ರಾನ್ ಬುರ್ಹಾನ್ ಈ ಚಿತ್ರವನ್ನು ಗುರುತಿಸಿದ್ಧಾರೆ. ಇಂಡೋನೇಷ್ಯಾದ ಅಧಿಕಾರಿಗಳೊಂದಿಗೆ ತಂಡವು ನಡೆಸುತ್ತಿರುವ ಸಮೀಕ್ಷೆಯ ಭಾಗವಾಗಿ ಈ ಚಿತ್ರಕಲೆ ಕಂಡುಬಂದಿದೆ ಎಂದು ಜರ್ನಲ್‌ನ ಸಹ ಲೇಖಕ, ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಮ್ಯಾಕ್ಸಿಮ್ ಆಬರ್ಟ್ ಹೇಳಿದ್ದಾರೆ.

136 ರಿಂದ 54 ಸೆಂಟಿಮೀಟರ್ ಅಳತೆ ಹೊಂದಿರುವ ಸುಲಾವೆಸಿ ವಾರ್ಟಿ ಹಂದಿಯನ್ನು ಕೆಂಪು ಓಚರ್ ವರ್ಣದ್ರವ್ಯವನ್ನು ಬಳಸಿ ಚಿತ್ರಿಸಲಾಗಿದ್ದು  ನೆಟ್ಟಗೆ ಕೂದಲು, ಒಂದು ಜೋಡಿ ಕೊಂಬು ಮುಖದ ನರಹುಲಿಗಳನ್ನು ಕಾಣಬಹುದು. ಹಂದಿಯ ಹಿಂಭಾಗದಲ್ಲಿ ಎರಡು ಕೈಗಳಿರುವ ಚಿತ್ರಗಳನ್ನು ನೋಡಬಹುದು. ಹಂದಿಯ ಚಿತ್ರ ಈ ಪ್ರದೇಶದ ಮಾನವ ವಸಾಹತುಗಳ ಆರಂಭಿಕ ಪುರಾವೆಗಳನ್ನು ಒದಗಿಸುತ್ತದೆ.

ಈ ಚಿತ್ರ ಹಂದಿಗಳ ನಡುವಿನ ಜಗಳ ಮತ್ತು ಸಾಮಾಜಿಕ ಸಂವಹನವನ್ನು ತೋರಿಸುತ್ತದೆ ಎನ್ನಲಾಗುತ್ತದೆ. ಡೇಟಿಂಗ್ ಸ್ಪೆಷಲಿಸ್ಟ್ ಆಗಿರುವ ಆಬರ್ಟ್, ಚಿತ್ರಕಲೆಯ ಮೇಲ್ಭಾಗದಲ್ಲಿ ರೂಪುಗೊಂಡಿದ್ದ ಕ್ಯಾಲ್ಸೈಟ್ ಠೇವಣಿಯನ್ನು ಗುರುತಿಸಿ ನಂತರ ಯುರೇನಿಯಂ-ಸರಣಿಯ ಐಸೊಟೋಪ್ ಡೇಟಿಂಗ್ ಅನ್ನು ಬಳಸಿಕೊಂಡು ಈ ಚಿತ್ರ 45,500 ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಿದ್ದಾರೆ. ಮಾತ್ರವಲ್ಲ “ಇದನ್ನು ಮಾಡಿದ ಜನರು ಸಂಪೂರ್ಣವಾಗಿ ಆಧುನಿಕರು, ಅವರು ನಮ್ಮಂತೆಯೇ ಇದ್ದರು, ಅವರು ಇಷ್ಟಪಡುವ ಯಾವುದೇ ವರ್ಣಚಿತ್ರವನ್ನು ಮಾಡುವ ಸಾಮರ್ಥ್ಯ ಮತ್ತು ಸಾಧನಗಳನ್ನು ಹೊಂದಿದ್ದರು” ಎಂದು ಅವರು ಹೇಳಿದ್ದಾರೆ.

 

Spread the love

Leave a Reply

Your email address will not be published. Required fields are marked *