ಬೆಳಗಾವಿ ಪುಂಡರ ಪುಂಡಾಟದ ವಿರುದ್ಧ ಚಾಮರಾಜನಗರದಲ್ಲಿ ಪೊರಕೆ ಚಳವಳಿ..!
ಮಹಾರಾಷ್ಟ್ರ ಬೆಳಗಾವಿ ಗಡಿ ಭಾಗದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟ ವಿರೋಧಿಸಿ ಇಂದು ಚಾಮರಾಜನರಗದಲ್ಲಿ ಕನ್ನಡ ಪರ ಸಂಘಟನೆಗಳು ಪೊರಕೆ ಚಳವಳಿಯನ್ನು ನಡೆಸಿವೆ.
ಬೆಳಗಾವಿ ನಮ್ಮದು ಎನ್ನುವ ಮಹಾರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ನಗರದ ಭುವನೇಶ್ವರ ವೃತ್ತದಲ್ಲಿ ಜಮಾಯಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ಚಪ್ಪಲಿ ಹಾಗೂ ಪೊರಕೆ ಹಿಡಿದು ಆಕ್ರೊಶ ಹೊರಹಾಕಿದರು. ಗಡಿ ಭಾಗದಲ್ಲಿ ನುಗ್ಗಿ ತಮ್ಮ ಧ್ವಜ ಸ್ಥಾಪನೆಗೆ ಮುಂದಾದ ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಶಿಕ್ಷೆ ಒಳಪಡಿಸಬೇಕು. ಇದಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯನ್ನು ನೇರ ಹೊಣೆ ಮಾಡಿ. ಶಾಂತವಾಗಿದ್ದ ಕನ್ನಡಿಗರನ್ನು ಕೆಣಕುವ ಕೆಲಸ ಮಹಾರಾಷ್ಟ್ರ ಸಿಎಂ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಿಡಿ ಕಾರಿದರು.

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, “ಬೆಳಗಾವಿ ನಮ್ಮದು. ಅದನ್ನು ಪಡೆಯುವವರೆಗೂ ಹೋರಾಡೋಣ” ಎಂದು ಕಿಡಿ ಹಚ್ಚುವಂತಹ ಟ್ವೀಟ್ ಮಾಡಿದ್ದರು.ಹೀಗಾಗಿ ನಿನ್ನೆ ಬೆಳಗಾವಿ ಗಡಿ ಭಾಗದಲ್ಲಿ ಶಿವಸೇನೆ ಪುಂಡರು ಪುಂಡಾಟ ಮೆರೆದು ಕನ್ನಡ ಧ್ವಜ ತೆರವಿಗೆ ಮುಂದಾಗಿದ್ದರು. ಇದರೊಂದಿಗೆ ರಾಜದ್ರೋಹಿ ಘೋಷಣೆಗಳನ್ನು ಕೂಗಿದ್ದರು. ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರರು ಹೋರಾಟಗಳನ್ನು ಮಾಡಿ ಆಕ್ರೊಶ ಹೊರಹಾಕಿದ್ದಾರೆ.

