ತಿಂದ ಮನೆಗೆ ದ್ರೋಹ ಬಗೆವ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಸರಿಯಾಗಿ ಎರಡು ತಿಂಗಳು ಪೂರೈಸಿದೆ. ಸರ್ಕಾರ ಮತ್ತು ರೈತರ ನಡುವೆ 11 ಸುತ್ತಿನ ಮಾತುಗಳು ನಡೆಸಿದ್ದು, ಎಲ್ಲಾ ಸಭೆಗಳೂ ಮುರಿದು ಬಿದ್ದಿವೆ. ರೈತ ಅಳಲು-ಆಕ್ರೋಶವನ್ನು ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ಹಿಂಪಡೆಯುವುದಿಲ್ಲ ಎಂಬ ಮೊಂಡುತನವನ್ನು ಪ್ರದರ್ಶಿಸುತ್ತಿದೆ. ಹೀಗಾಗಿ ರೈತರು ನಾಳೆ (ಜ.26) ಗಣರಾಜ್ಯೋತ್ಸವ ದಿನದಂದು ದೆಹಲಿ ಗಡಿಯಲ್ಲಿ ಮತ್ತು ದೇಶಾದ್ಯಂತ ಟ್ರಾಕ್ಟರ್‌ ಪರೇಡ್‌ ನಡೆಸಲು ಮುಂದಾಗಿವೆ. ದೇಶಾದ್ಯಂತ ಇದಕ್ಕೆ ಬೆಂಬಲ ವ್ಯಕ್ತವಾಗಿದ್ದು, ಹಲವಾರು ರಾಜ್ಯಗಳಲ್ಲಿ ಟ್ರಾಕ್ಟರ್ ರ್ಯಾಲಿ ನಡೆಯಲಿದೆ.

ರೈತರ ಹೋರಾಟ 60 ದಿನಗಳನ್ನು ಮುಟ್ಟಿದ್ದರೂ ಮಾಧ್ಯಮಗಳು ಮಾತ್ರ ರೈತರ ಹೋರಾಟವನ್ನು ವರದಿ ಮಾಡುವುದರಿಂದ ದೂರ ಉಳಿದಿವೆ. ಬದಲಾಗಿ, ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು, ಕಾನೂನುಗಳ ಪರವಾದ ಡಿಬೇಟ್- ಸ್ಪೆಷಲ್‌ ಸ್ಟೋರಿಗಳನ್ನು ಮಾಡುತ್ತಾ, ಬಿಜೆಪಿಗೆ ತನ್ನ ಸ್ವಾಮಿ ನಿಷ್ಠೆಯನ್ನು ತೋರಿಸುತ್ತಿವೆ.

ಗೋದಿ ಮೀಡಿಯಾಗಳು ಎಂದು ಕರೆಸಿಕೊಳ್ಳುತ್ತಿರುವ ಆಜ್‌ತಕ್, ಎಬಿಪಿ, ರಿಪಬ್ಲಿಕ್‌ ಟಿವಿ ಮತ್ತು ಝೀ ನ್ಯೂಸ್ ಚಾನೆಲ್‌ಗಳು ರೈತ ಹೋರಾಟಗಾರರನ್ನು ನಕಲಿ ರೈತರು, ಭಯೋತ್ಪಾದಕರು, ಖಲಿಸ್ಥಾನಿಗಳು ಎಂದು  ಬಿಂಬಿಸುತ್ತಿವೆ.

ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಪ್ರಮುಖವಾಗಿ ಆರು ರಾಜ್ಯಗಳ ರೈತರು ಮತ್ತು ವಿವಿಧ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ಬೀಡುಬಿಟ್ಟು ಹೋರಾಟ ನಡೆಸುತ್ತಿದ್ದಾರೆ. ಚಳಿ-ಗಾಳಿ-ಮಳೆಗೆ ಅಳುಕತೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಮಾಧ್ಯಮಗಳು ಈ ಹೋರಾಟ ಕೇವಲ ಪಂಜಾಬಿಗಳ ಹೋರಾಟ, ಅದರಲ್ಲೂ ಖಲಿಸ್ತಾನಕ್ಕಾಗಿ ಬೇಡಿಕೆ ಇಟ್ಟಿದ್ದವರ ಹೋರಾಟ, ರೈತರನ್ನು ಹಾದಿ ತಪ್ಪಿಸಲು ಮತ್ತು ದೇಶವನ್ನು ಒಡೆಯುವುದಕ್ಕಾಗಿ ಈ ಹೋರಾಟವನ್ನು ಮಾಡುತ್ತಿದ್ದಾರೆ ಎಂದು ಕತೆ ಕಟ್ಟಿ, ಸುಳ್ಳುಗಳ ಸರಮಾಲೆ ಎಣೆದು ರೈತ ವಿರೋಧಿ ಧೋರಣೆಯನ್ನು ಜನರ ಮನಸ್ಸಿನಲ್ಲಿ ಭಿತ್ತುತ್ತಿವೆ.

ಅಲ್ಲದೆ, ಬಿಜೆಪಿಯ ಎಂಜಲು ಕಾಸಿಗಾಗಿಯೂ, ಹಿಂದೂತ್ವದ ಕೋಮು ವಿಷ ಪ್ರಸಾನವನ್ನು ಗಂಟಲಿಗೇರಿಸಿಕೊಂಡು ದ್ವೇಷವನ್ನು ಹರಡುವುದರಲ್ಲಿ ನಿರತವಾಗಿವೆ. ಈ ಕಾರಣಕ್ಕಾಗಿಯೇ ಲಕ್ಷಾಂತರ ರೈತರ ಹೋರಾಟವನ್ನು ಮಾಧ್ಯಮಗಳು ನಿರ್ಲಕ್ಷಿಸಿವೆ. ಹಾಗಾಗಿ, ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೂ –ಪ್ರತಿಭಟನಾಕಾರರನ್ನು ದೇಶದ್ರೋಹಿಗಳು, ಭಯೋತ್ಪಾದರು ಎಂದು ಬಿಂಬಿಸುತ್ತಿವೆ.

ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್‌ನ 36 ಸಂಸದರ ಬೆಂಬಲ!

ರೈತರ ವಿಚಾರದಲ್ಲೂ ವಿಷ ಕಕ್ಕುತ್ತಿರುವ ರಿಪಬ್ಲಿಕ್‌ ಟಿವಿ, “ಈ ಹಿಂದೆ ಪ್ರತಿ ಬಾಗ್‌ಗಳನ್ನು ಶಾಹೀನ್‌ ಬಾಗ್‌ ಮಾಡಿ ಎಂದು ಕರೆಕೊಟ್ಟಿದ್ದ ಚಂದ್ರಶೇಖರ್ ಆಜಾದ್ ಇದ್ದಕ್ಕಿದ್ದಂತೆ ರೈತರ ಪ್ರತಿಭಟನೆಯಲ್ಲಿ ಇಳಿಯುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಶಾಹೀನ್‌ ಬಾಗ್‌ನಲ್ಲಿ ಸಿಎಎ ವಿರುದ್ಧ ಜನರನ್ನು ಸಜ್ಜುಗೊಳಿಸುತ್ತಿದ್ದ ಅದೇ ಯೋಗೇಂದ್ರ ಯಾದವ್ ರೈತ ಮಸೂದೆಗಳ ವಿರುದ್ದ ರೈತರಲ್ಲಿ ತಪ್ಪು ಮಾಹಿತಿ ಹರಡುವ ಅಭಿಯಾನ ನಡೆಸುತ್ತಿದ್ದಾರೆ” ಎಂದು ವರದಿ ಮಾಡಿತ್ತು.

ಅಲ್ಲದೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇದು ಸಂಭವಿಸಿದೆ. ಈಗ ಸಿಂಗುವಿನಲ್ಲಿನ ಅದೇ ನಡೆಯುತ್ತಿದೆ. ಅವರೆಲ್ಲರೂ “ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಎತ್ತುವವರು” ಎಂದು ರೈತರ ವಿರುದ್ದ ಜೀ ನ್ಯೂಸ್‌ ವರದಿ ಮಾಡಿತ್ತು.

ಹೀಗಾಗಿಯೇ, “ರಾಷ್ಟ್ರೀಯ ಮಾಧ್ಯಮ ನಮ್ಮೊಂದಿಗಿಲ್ಲ… ಆಜ್ ತಕ್, ಝೀ ನ್ಯೂಸ್, ಎಬಿಪಿಗಳಂತ ಮಾಧ್ಯಮಗಳು ಸರ್ಕಾರವನ್ನು ಸಮರ್ಥಿಸಲು ರೈತರನ್ನು ಪ್ರತ್ಯೇಕವಾದಿಗಳು, ಭಯೋತ್ಪಾದಕರು ಎಂದು ಬೊಗಳೆ ಬಿಡುತ್ತಿವೆ. ಇವು ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿವೆ ಎಂದು ರೈತರು ಕಿಡಿಕಾರಿದ್ದಾರೆ.

“ನಮ್ಮಲ್ಲಿ ಯಾವ ಶಸ್ತ್ರಾಸ್ತ್ರಗಳಿವೆ? ನಿಮಗೆ ನಾವು ಯಾವ ರೀತಿಯಲ್ಲಿ ಭಯೋತ್ಪಾದಕರಂತೆ ಕಾಣುತ್ತಿದ್ದೇವೆ. ನಾವು ಭಯೋತ್ಪಾದಕರು ಎಂದು ಎಂದು ಯಾರಿಗಾಗಿ ಹೇಳುತ್ತಿದ್ದೀರಿ? ನಾವು ರೈತರು, ವಿದ್ಯಾವಂತ ರೈತರು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನುಗಳ ಪಾಸಿಟಿವ್ ವರದಿ ಮಾಡುವ ಮಾಧ್ಯಮಗಳಿಗೆ ಮಾಹಿತಿ ಮೂಲ ಯಾರು ಗೊತ್ತೇ?

ಸರ್ಕಾರವು ಧಾನ್ಯಗಳ ಸಂಗ್ರಹ ಮಿತಿಯನ್ನು ಹೆಚ್ಚಿಸಲು ಹೊರಟಿದೆ. “ಅಗತ್ಯ ದಾಸ್ತಾನುಗಳ ಸಂಗ್ರಹ ಮಿತಿ ಮೀರಿದ ದಿನ, ಸಾಮಾನ್ಯ ಜನರು ಸಾಯುತ್ತಾರೆ.” ಇದು ಜನರಿಗೆ ತಿಳಿದಿಲ್ಲ. ಮಾಧ್ಯಮಗಳಿಗೆ ಇದರ ಪರಿಣಾಮ ಅರ್ಥವಾಗುತ್ತಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ತುಟಿಬಿಚ್ಚುವುದಿಲ್ಲ ಎಂದು ರೈತರು ಹೇಳಿದ್ದಾರೆ.

ಕೇಂದ್ರದ ನೀತಿಗಳು ರೈತರಿಗೆ ಸರಿಯಾಗಿ ಅರ್ಥವಾಗಿಲ್ಲ ಎಂದು ಮಾಧ್ಯಮಗಳು ಹೇಳುತ್ತಿವೆ. ನಾನೊಬ್ಬ ಅನಕ್ಷರಸ್ಥ ರೈತ, ಆದರೆ, ಈ ನೀತಿಗಳು ಹೇಗೆ ರೈತರಿಗೆ ಪ್ರಯೋಜಕಾರಿಯಾಗಿವೆ ಎಂದು ಯಾರಾದರು ನನ್ನನ್ನು ಒಪ್ಪಿಸಲಿ ಎಂದು ರೈತರೊಬ್ಬರು ಸವಾಲು ಹಾಕಿದ್ದಾರೆ.

ಸರ್ಕಾರವನ್ನು ಪ್ರಶ್ನಿಸುವವರೆಲ್ಲರೂ ರಾಷ್ಟ್ರ ವಿರೋಧಿಗಳಾದರೆ, ದೇಶದ ಪ್ರಜೆ ಯಾರು? ದೇಶದ ನಾಗರಿಕರು ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಯಾವಾಗಲೂ ಸರ್ಕಾರವೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಆದರೆ, ಸರ್ಕಾರ ಕೈಗೊಂಬೆಯಾಗಿರುವ ಮಾಧ್ಯಮಗಳು ಪ್ರಶ್ನೆ ಮಾಡುವ ನಾಗರಿಕರನ್ನು ಅಪರಾಧಿಗಳೆಂದು ಬಿಂಬಿಸುತ್ತಿವೆ. ಈ ಮಾಧ್ಯಮಗಳು ಎಂದಿಗೂ ನಮ್ಮೊಂದಿಗೆ ಇರಲಾರವು ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರೈತರು ತಮ್ಮದೇ ಆದ ವಾರ ಪತ್ರಿಕೆಯನ್ನೂ, ಯೂಟ್ಯೂಬ್‌ ಚಾನೆಲ್‌ಅನ್ನೂ ಆರಂಭಿಸಿದ್ದಾರೆ. ರೈತ ಹೋರಾಟ ಪ್ರತಿ ಅಪ್‌ಡೇಟ್‌ಗಳನ್ನೂ ಆ ಮೂಲಕ ಜನರಿಗೆ, ರೈತರಿಗೆ ತಲುಪಿಸುವ ಕೆಲಸವನ್ನೂ ರೈತರೇ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಾನೆಲ್‌ಗಳ ವಿರುದ್ಧ ಸಿಡಿದೆದ್ದ ಪ್ರತಿಭಟನಾ ನಿರತ ಅನ್ನದಾತರಿಂದ ಯೂಟ್ಯೂಬ್ ಚಾನೆಲ್ ಆರಂಭ!

 

Spread the love

Leave a Reply

Your email address will not be published. Required fields are marked *