ಖಾತೆ ಅದಲು ಬದಲು ಆಟದಲ್ಲಿ ಬೇಸತ್ತ ಸಚಿವರು : ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್, ಮಾಧುಸ್ವಾಮಿ?
ಖಾತೆ ಅದಲು ಬದಲು ಆಟದಲ್ಲಿ ಬೇಸತ್ತ ಸಚಿವರು ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸಚಿವ ಆನಂದ್ ಸಿಂಗ್ ಮತ್ತು ಸಚಿವ ಮಾಧುಸ್ವಾಮಿ ಖಾತೆ ಅದಲು ಬದಲು ಮಾಡಿದ್ದಕ್ಕೆ ಬೇಸತ್ತಿದ್ದಾರೆ.
ತಮ್ಮ ಬಳಿ ಇದ್ದ ಖಾತೆಯನ್ನು ಸಿಎಂ ವಾಪಸ್ಸು ಪಡೆದಿದ್ದರಿಂದ ಆನಂದ್ ಸಿಂಗ್ ನಾಳೆ ಧ್ವಜಾರೋಹಣದ ಬಳಿಕ ರಾಜೀನಾಮೆ ಕೊಡುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಮಾಧುಸ್ವಾಮಿ ಕೂಡ ತಮ್ಮ ಬಳಿ ಇದ್ದ ಖಾತೆಯನ್ನು ವಾಪಸ್ ಪಡೆದಿದ್ದಕ್ಕೆ ಬೇಸರಗೊಂಡಿದ್ದಾರೆ. ಹೀಗಾಗಿ ಅವರೂ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
‘ನಾನು ರಾಜೀನಾಮೆ ಕಳುಹಿಸುತ್ತೇನೆ ದಯವಿಟ್ಟು ಅಂಗೀಕಾರ ಮಾಡಿ’ ಎಂದು ಫೋನ್ ನಲ್ಲಿ ಸಿಎಂ ಯಡಿಯೂರಪ್ಪ ಜೊತೆ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.
ಸಚಿವ ಸುಧಾಕರ್ ಮಾಧುಸ್ವಾಮಿ ಅವರಿಗೆ ಕೊಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ತೆರೆಮರೆಯಲ್ಲಿ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಹೀಗೆ ಪಟ್ಟು ಹಿಡಿದವರಿಗೆ ಖಾತೆ ಕೊಡುವುದಾದರೆ ಮಾಧುಸ್ವಾಮಿ ಕೂಡ ಸಣ್ಣ ನೀರಾವರಿಗೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ ಸಚಿವ ಮಾಧುಸ್ವಾಮಿಯವರನ್ನು ಸಮಾಧಾನಗೊಳಿಸಲು ಸಚಿವ ಆನಂದ್ ಸಿಂಗ್ ಬಳಿಯಿಂದ ಖಾತೆಯನ್ನು ನೀಡಲಾಗಿದೆ. ಹೀಗಾಗಿ ಆನಂದ್ ಸಿಂಗ್ ‘ನನಗೆ ಯಾವ ಖಾತೆ ಬೇಡ. ನನ್ನ ಖಾತೆ ಯಾರು ಕೇಳ್ತಾರೋ ಅವರಿಗೆ ಕೊಟ್ಟುಬಿಡಿ. ನಾನು ಶಾಸಕನಾಗೇ ಇರುತ್ತೇನೆ’ ಎಂದು ಸಿಎಂಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಎರಡು ಬಾರಿ ಖಾತೆ ಹಂಚಿಕೆ ಅದಲು ಬದಲಾಗಿದ್ದು ಸಚಿವರಿಗೆ ಉನ್ನತ ಖಾತೆ ಸಿಗದೇ ಕೈತಪ್ಪಿದ್ದು ಅಸಮಾಧಾನ ಭುಗಿಲೆದ್ದಿದೆ. ಸಿಎಂ ಯಿಡಿಯೂರಪ್ಪ ಒಬ್ಬರ ಬೇಸರ ಶಮನ ಮಾಡಲು ಮತ್ತೊಬ್ಬರಿಗೆ ಅಸಮಧಾನಗೊಳಿಸುತ್ತಿರುವುದು ರಾಜ್ಯರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಮನ್ಸೂಚನೆ ನೀಡುತ್ತಿದೆ.