ರೈತರ ಪರೇಡ್‌ಗೆ ಬೆಂಬಲ: ಬೆಂಗಳೂರಿನಲ್ಲಿ 10,000 ಹೋರಾಟಗಾರರಿಗೆ ಊಟ ನೀಡಿದ ಟ್ರಾನ್ಸ್ ಜೆಂಡರ್ ಸಮುದಾಯ!

ಇಂದು ದೇಶಾದ್ಯಂತ ಐತಿಹಾಸಿಕ ಟ್ರ್ಯಾಕ್ಟರ್ ರ್ಯಾಲಿ ನಡೆಯುತ್ತಿದೆ. ದೆಹಲಿಯಲ್ಲಾಗಲೇ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಶಾಂತಿಯುತ ಪರೇಡ್ ಶುರು ಮಾಡಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಜನ ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದ್ದು ಸಾವಿರಾರು ಜನ ರಾಜಧಾನಿಯತ್ತ ಮೆರವಣಿಗೆ ಹೊರಟಿದ್ದಾರೆ. ಅವರಿಗೆಲ್ಲರಿಗೂ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಟ್ರಾನ್ಸ್ ಜೆಂಡರ್ ಸಂಘಟನೆಗಳು ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿವೆ.

ಇಂದು ಬೆಳಿಗ್ಗೆಯೇ ರೈಲ್ವೇ ನಿಲ್ದಾಣದ ಬಳಿ ಜಮಾಯಿಸಿರುವ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಗಳು ಹೋರಾಟಕ್ಕಾಗಿ ಆಗಮಿಸುವ 10,000 ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿವೆ. ಆ ಮೂಲಕ “ಇಷ್ಟು ದಿನ ಅನ್ನ ಹಾಕಿದ ರೈತರಿಗೆ ಹೋರಾಟದ ದಿನ ನಾವು ಊಟ ನೀಡುತ್ತಿದ್ದೇವೆ. ಇದು ನಮ್ಮ ಕರ್ತವ್ಯ. ನಾವು ರೈತರ ಹೋರಾಟದೊಂದಿಗೆ ಇದ್ದೇವೆ” ಎಂದು ಸಾರಿದ್ದಾರೆ.

“ಇಂದು ನಾವು ಜನ ಗಣರಾಜ್ಯೋತ್ಸವ ಮಾಡುತ್ತಿದ್ದೇವೆ. ಇಂದು ದೇಶದಲ್ಲಿನ ರೈತರ ಪರಿಸ್ಥಿತಿ ನೋಡಿ ನಮಗೆ ದಿಗ್ಭ್ರಮೆಯಾಗಿದೆ. ಇಂದು ನಾವೆಲ್ಲ ಜೀವಂತವಾಗಿದ್ದೇವೆ ಎಂದರೆ ಅದಕ್ಕೆ ರೈತರೇ ಕಾರಣ. ಅಂತಹ ರೈತರ ಮೇಲೆ ಈ ಕ್ರೂರ ಬಿಜೆಪಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಅನ್ನ ನೀಡುವ ರೈತರ ಮೇಲೆ ಕೇಂದ್ರ ಸರ್ಕಾರ ಕಾಲಿನಿಂದ ಒದೆಯುತ್ತಿದೆ. ಅಂತಹ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಲು ನಾವು ಹೋರಾಟಕ್ಕೆ ಬಂದಿದ್ದೇವೆ. ಹೋರಾಟಕ್ಕೆ ಲೈಂಗಿಕ ಅಲ್ಪಸಂಖ್ಯಾತರ ಬೆಂಬಲವಿದೆ ಎಂದು ತಿಳಿಸಲು ಹತ್ತು ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದೇವೆ. ನಾವು ನಿಮ್ಮ ಜೊತೆಗಿದ್ದೇವೆ ಎಂದು ಸಾರುತ್ತಿದ್ದೇವೆ” ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ವೀಣಾ ತಿಳಿಸಿದ್ದಾರೆ.

ಇಂದು ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದ ಒಂದು ತಂಡ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಒಂದು ತಂಡ, ಮಡಿಕೇರಿ, ಮೈಸೂರು, ಮಂಡ್ಯ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೈಸೂರು ಮಾರ್ಗದಿಂದ ಬರುವ ರೈತರು ಬಿಡದಿ ಕೈಗಾರಿಕಾ ಜಂಕ್ಷನ್‌ನಲ್ಲಿ, ಉತ್ತರ ಕರ್ನಾಟಕದಿಂದ ಬರುವ ರೈತರು ತುಮಕೂರು-ನೈಸ್‌ರಸ್ತೆ ಜಂಕ್ಷನ್‌, ಚಿಕ್ಕಬಳ್ಳಾಪುರ ಕಡೆಯಿಂದ ಬರುವ ರೈತರು ದೇವನಹಳ್ಳಿ ನಂದಿ ಕ್ರಾಸ್‌ ಬಳಿ ಹಾಗೂ ಕೊಲಾರ ಕಡೆಯಿಂದ ಬರುವ ರೈತರು ಹೊಸಕೋಟೆ ಟೋಲ್‌ ಬಳಿ ಹಾಗೂ ಬೆಂಗಳೂರು ಸಿಟಿ ರೈಲ್ವೆ ಜಂಕ್ಷನ್‌ನಲ್ಲಿ ಸೇರಲಿದ್ದಾರೆ. ರೈತರು ಮಧ್ಯಾಹ್ನ 12.30ಕ್ಕೆ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆಯಲಿದ್ದಾರೆ.

ಇದನ್ನೂ ಓದಿ: ಬ್ಯಾರಿಕೇಡ್‌ ಮುರಿದು ಮುನ್ನುಗಿದ ರೈತರು; ಮೂಕ ಪ್ರೇಕ್ಷಕರಂತೆ ನಿಂತ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights