Fact Check: ಖಲಿಸ್ತಾನಿ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸಲಾಯಿತಾ?

ರಾಷ್ಟ್ರೀಯ ರಾಜಧಾನಿ ನವದೆಹಲಿ ಗಡಿ ಪ್ರದೇಶದಲ್ಲಿ ಎರಡು ತಿಂಗಳ ಕಾಲ ನಡೆದ ರೈತರ ಆಂದೋಲನವು ಗಣರಾಜ್ಯೋತ್ಸವದಂದು ಪರಾಕಾಷ್ಠೆಯನ್ನು ತಲುಪಿತ್ತು. ಈ ವೇಳೆ ಕೆಲವು ಪ್ರತಿಭಟನಾಕಾರರು ಕೆಂಪು ಕೋಟೆಗೆ ನುಗ್ಗಿ ತಮ್ಮ ಧ್ವಜವನ್ನು ಹಾರಿಸಿದರು. ಈ ವೇಳೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಧ್ವಜದ ಸ್ವರೂಪವನ್ನು ಚರ್ಚಿಸಲು ಪ್ರಾರಂಭಿಸಿದರು.

ಇದನ್ನು ಭಾರತಕ್ಕೆ ಕಪ್ಪು ದಿನ ಎಂದು ಕರೆಯುವ ಹಲವಾರು ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಖಲಿಸ್ತಾನಿ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಆದರೆ ದೆಹಲಿ ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜದ ಬದಲು ಖಲಿಸ್ತಾನಿ ಧ್ವಜವನ್ನು ಹಾರಿಸಲಾಗಿಲ್ಲ. ಆದರೆ ಸಿಖ್ಖರ ಧಾರ್ಮಿಕ ಧ್ವಜವಾದ ನಿಶಾನ್ ಸಾಹಿಬ್ ಅನ್ನು ಕೆಂಪು ಕೋಟೆಯಲ್ಲಿ ಹಾರಿಸಲಾಗಿದೆ. ನಿಶಾನ್ ಸಾಹಿಬ್ ಧ್ವಜದಲ್ಲಿ ‘ಖಂಡ’ (ಎರಡು ಅಂಚಿನ ಬಾಕು) ಚಿಹ್ನೆ ಇದ್ದರೆ, ಖಲಿಸ್ತಾನಿ ಧ್ವಜಗಳ ಮೇಲೆ ‘ಖಲಿಸ್ತಾನ್’ ಎಂದು ಬರೆಯಲಾಗಿದೆ.

ಮೂರು ಕೃಷಿ ವಿರೋಧಿ ಕಾನೂನುಗಳನ್ನು ಕೈ ಬಿಡುವಂತೆ ಸರ್ಕಾರದ ಗಮನ ಸೆಳೆಯಲು ಜನವರಿ 26 ರಂದು ರೈತರು ಶಾಂತಿಯುತ ಟ್ರ್ಯಾಕ್ಟರ್ ರ್ಯಾಲಿಗೆ ಕರೆ ಕೊಟ್ಟಿದ್ದರು. ಈ ವೇಳೆ ಕೆಲ ಪ್ರತಿಭಟನಾಕಾರರ ಗುಂಪೊಂದು ಪೊಲೀಸರ ಷರತ್ತುಗಳನ್ನು ಮೀರಿ ಮಾರ್ಗ ಬದಲಿಸಿದೆ. ಪೊಲೀಸರೊಂದಿಗೆ ಘರ್ಷಣೆಗೆ ಮುಂದಾಗಿದೆ. ಹೀಗಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಶ್ರುವಾಯು, ಲಾಠಿಚಾರ್ಜ್ ನಡೆದಿದೆ. ಈ ವೇಳೆ ಕೆಂಪು ಕೋಟೆಗೆ ನುಗ್ಗಿದ ಪ್ರತಿಭಟನಾಕಾರರ ಗುಂಪು ತಮ್ಮ ಧ್ವಜವನ್ನು ಹಾರಿಸಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಪೊಲೀಸರು 22 ಕೇಸ್ ಗಳನ್ನು ದಾಖಲಿಸಿದ್ದಾರೆ. ಘಟನೆಯಲ್ಲಿ ಸಾಕಷ್ಟು ಜನರಿಗೆ ಗಾಯಗಳಾಗಿವೆ.

ಅದು ಖಲಿಸ್ತಾನಿ ಧ್ವಜವೇ?
ಎಎನ್‌ಐ ವೀಡಿಯೊದಲ್ಲಿ ಧ್ವಜವನ್ನು ಜೂಮ್ ಮಾಡುವಾಗ, ಧ್ವಜದ ಬಣ್ಣ ತಿಳಿ ಹಳದಿ ಬಣ್ಣದ್ದಾಗಿದೆ ಮತ್ತು ಅದರ ಮೇಲೆ ‘ಖಂಡಾ’ ಎಂದು ಮುದ್ರಿಸಲಾಗಿದೆ. ‘ಖಂಡ’ ಎನ್ನುವುದು ಸಿಖ್ ಧರ್ಮದಲ್ಲಿ ಬಳಸಲಾಗುವ ಲಾಂಛನವಾಗಿದ್ದು, ಇದು ಎರಡು ಅಂಚಿನ ಕತ್ತಿ, ಚಕ್ರ ಮತ್ತು ಎರಡು ಏಕ ಅಂಚಿನ ಕತ್ತಿಗಳನ್ನು ಒಳಗೊಂಡಿದೆ. ಈ ಲಾಂಛನವನ್ನು ಗುರು ಗೋಬಿಂದ್ ಸಿಂಗ್ ಅವರ ಸಮಯದಲ್ಲಿ ಪರಿಚಯಿಸಲಾಯಿತು.

ವಿಡಿಯೋದಲ್ಲಿ ಕಂಡುಬರುವ ಧ್ವಜದ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಸಿಖ್ ವಿದ್ವಾಂಸ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಹಿರಿಯ ಸದಸ್ಯ ಹರಿಂದರ್ ಪಾಲ್ ಸಿಂಗ್ ಅವರೊಂದಿಗೆ ಮಾತನಾಡಿದಾಗ, “ಕೆಂಪು ಕೋಟೆಯಲ್ಲಿ ನಡೆದ ಘಟನೆಯನ್ನು ನಾವು ಬೆಂಬಲಿಸುವುದಿಲ್ಲ ಮತ್ತು ಕೆಂಪು ಕೋಟೆಯಲ್ಲಿ ಯಾವುದೇ ಧಾರ್ಮಿಕ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ಸಿಂಗ್ ಮೊದಲು ಈ ಘಟನೆಯನ್ನು ಖಂಡಿಸಿದರು.

“ಕೆಂಪು ಕೋಟೆಯಲ್ಲಿ ಧ್ವಜಾರೋಹಣವು ನಿಶಾನ್ ಸಾಹಿಬ್ ಮತ್ತು ಖಲಿಸ್ತಾನ್ ಧ್ವಜವಲ್ಲ. ನಾನು ಅದನ್ನು ಸ್ಪಷ್ಟವಾಗಿ ನೋಡಿದ್ದೇನೆ ಮತ್ತು ಇದು ಸಿಖ್ ಆಧ್ಯಾತ್ಮಿಕತೆಯ ಸಂಕೇತವಾದ ನಿಶಾನ್ ಸಾಹಿಬ್ ಧ್ವಜವಾಗಿದ್ದು ಕೆಂಪು ಕೋಟೆಯಲ್ಲಿ ಹಾರಿಸಲಾಯಿತು. ಇದು ಖಲಿಸ್ತಾನ್ ಧ್ವಜವಲ್ಲ ”ಎಂದು ಸಿಂಗ್ ಹೇಳಿದ್ದಾರೆ.

ಮಾತ್ರವಲ್ಲ ಜನವರಿ 26 ರ ಪ್ರತಿಭಟನೆಯಲ್ಲಿ ವಿವಿಧ ಸಂಸ್ಥೆಗಳು ಭಾಗವಹಿಸಿದ್ದು ಹಲವಾರು ಧ್ವಜಗಳು ಇದ್ದವು. ಪ್ರತಿಭಟನಾ ಸ್ಥಳದಲ್ಲಿ ಕಂಡುಬರುವ ಪ್ರತಿಯೊಂದು ಧ್ವಜವನ್ನು ನಾವು ನಿಜವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ್ದು ಅತ್ಯಂತ ವಿವಾದಾತ್ಮಕ ಘಟನೆಯಾಗಿದ್ದು ಇದು ಖಲಿಸ್ತಾನ್ ಧ್ವಜವಲ್ಲ. ಬದಲಿಗೆ ಇದು ಸಿಖ್ ಧಾರ್ಮಿಕ ಧ್ವಜ ನಿಶಾನ್ ಸಾಹಿಬ್ ಎಂದು ಸ್ಪಷ್ಟವಾಗಿದೆ. ಅಲ್ಲದೆ, ಘಟನೆಯ ಸಮಯದಲ್ಲಿ ಯಾವುದೇ ತ್ರಿವರ್ಣವನ್ನು ತೆಗೆದುಹಾಕಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights