‘ತಾಲಿಬಾನಿಗಳು ಕೊಂದರೂ ಪರವಾಗಿಲ್ಲ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುತ್ತೇವೆ’ ಅಫಘಾನ್ ಶಿಕ್ಷಕರ ಪ್ರತಿಜ್ಞೆ..!
ತಾಲಿಬಾನಿಗಳು ನಮ್ಮನ್ನು ಕೊಂದರೂ ಪರವಾಗಿಲ್ಲ ನಾವು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುತ್ತೇವೆ ಎಂದು ಅಫಘಾನ್ ಶಿಕ್ಷಕರು ಪಣತೊಟ್ಟಿದ್ದಾರೆ.
ತಾಲಿಬಾನ್ ಹೊಸ ಆಡಳಿತದೊಂದಿಗೆ ನಿರ್ಬಂಧಗಳನ್ನು ತಂದರೂ ಕೂಡ ಅಫಘಾನ್ ಶಿಕ್ಷಕ ಮತ್ತು ಶಿಕ್ಷಕಿಯರು ಬಾಲಕಿಯರ ಶಿಕ್ಷಣಕ್ಕಾಗಿ ಹೋರಾಡುವುದನ್ನು ಮುಂದುವರಿಸಲು ಪ್ರತಿಜ್ಞೆ ಮಾಡಿದ್ದಾರೆ. ಶಿಕ್ಷಕರು ತಮ್ಮ ಜೀವವನ್ನು ಕಳೆದುಕೊಂಡರೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ದಿ ಟೆಲಿಗ್ರಾಫ್ ಯುಕೆಯೊಂದಿಗೆ ಮಾತನಾಡುತ್ತಾ, ಕಂದಹಾರ್ ಪ್ರಾಂತ್ಯದ ಶಿಕ್ಷಕರೊಬ್ಬರು, “ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಜೀವವನ್ನು ಕಳೆದುಕೊಂಡರೂ ನಾನು ಬಾಲಕಿಯರಿಗೆ ಶಿಕ್ಷಣ ಕೊಡುವುದನ್ನ ಎಂದಿಗೂ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ 13 ಹಿಂದುಳಿದ ಪ್ರಾಂತ್ಯಗಳಲ್ಲಿ 100 ಕ್ಕೂ ಹೆಚ್ಚು ಶಾಲೆಗಳನ್ನು ತೆರೆದಿರುವ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಮಹಿಳಾ ಶಿಕ್ಷಣದ ಹಕ್ಕುಗಳಿಗಾಗಿ ಪ್ರಚಾರ ಮಾಡುತ್ತಿದ್ದಾರೆ.
ಟೆಲಿಗ್ರಾಫ್ ವರದಿಯ ಪ್ರಕಾರ, ಹೆರಾತ್ ನಲ್ಲಿ ತಾಲಿಬಾನ್ ಈಗಾಗಲೇ ತಮ್ಮ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವಂತೆ ವಿಶ್ವವಿದ್ಯಾಲಯಗಳಿಗೆ ಹೇಳಿದೆ. ತಾಲಿಬಾನ್ ಮಹಿಳಾ ಶಿಕ್ಷಕರು ಮಾತ್ರ ವಿದ್ಯಾರ್ಥಿನಿಯರಿಗೆ ಕಲಿಸಬೇಕು ಎಂದು ಹೇಳಿದೆ.
“ತಾಲಿಬಾನ್ ಮರಳಿದ ನಂತರ, ನಾವು ನಮ್ಮ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ ಎಂದು ನಾವು ಹೆದರುತ್ತಿದ್ದೇವೆ, ಆದರೆ ಶಾಲೆಗೆ ಹೋಗುವುದನ್ನು ತಡೆಯುವುದಿಲ್ಲ ಮತ್ತು ನಮ್ಮ ಹಕ್ಕುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಾಲಿಬಾನ್ ಹೇಳುತ್ತಿದೆ. ತಾಲಿಬಾನ್ ನಮ್ಮನ್ನು ಅಧ್ಯಯನ ಮಾಡಲು ಬಿಡದಿದ್ದರೆ, ನಾವು ನಿಲ್ಲುವುದಿಲ್ಲ ಮತ್ತು ನಮ್ಮಲ್ಲಿರುವ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ”ಎಂದು ಅಫ್ಘಾನ್ ಶಿಕ್ಷಕರೊಬ್ಬರು ಹೇಳಿದರು.