ಫ್ಯಾಕ್ಟ್‌ಚೆಕ್ : ರಾಣಿ ಎಲಿಜಬೆತ್ II ಆಫ್ರಿಕನ್ ಮಕ್ಕಳಿಗೆ ನೀಡುವ ಆಹಾರವನ್ನು ನೆಲಕ್ಕೆ ಎಸೆದ ದೃಶ್ಯಗಳು ಎಂಬುದು ಸುಳ್ಳು

ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ರಾಣಿ ಎಲಿಜಬೆತ್ II, ಸೆಪ್ಟೆಂಬರ್ 8, 2022 ರಂದು ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು. ಎಲಿಜಬೆತ್ II 70 ವರ್ಷಗಳ ಕಾಲ ರಾಣಿ ಪಟ್ಟವನ್ನು ಅಲಂಕರಿಸಿದ್ದರು.  ರಾಣಿ ಎಲಿಜಬೆತ್ ತೀರಿಕೊಂಡು ವಾರಗಳು ಕಳೆಯುತ್ತಾ ಬಂದಿವೆ ಈಗ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

” ರಾಣಿ ಎಲಿಜಬೆತ್ II ತಾವು ಬದುಕಿದ್ದಾಗ ಒಮ್ಮೆ, ಆಫ್ರಿಕನ್ ಮಕ್ಕಳನ್ನು ಭೇಟಿಯಾಗಿದ್ದ ವೇಳೆ ನೆಲಕ್ಕೆ ಆಹಾರವನ್ನು ಎಸೆಯುವ ಮೂಲಕ ತಮ್ಮ ಧರ್ಪ ತೋರಿದ್ದರು ಎನ್ನುವ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ರಾಣಿ ಎಲಿಜಬೆತ್ II ರ ಸಾವಿಗೆ ಆಫ್ರಿಕನ್ನರು ಶೋಕಿಸಲಾರರು. ನಮ್ಮ ಹಿರಿಯರಿನ್ನು ಕೀಳಾಗಿ ಕಂಡ ಇತರರೆಲ್ಲರನ್ನು ಸಾವು ಭೇಟಿ ಮಾಡಿ ಅವರನ್ನು ನರಕಕ್ಕೆ ಕೊಂಡೊಯ್ಯಲಿ, ಎಂಬ ಹೇಳಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಇರುವಂತೆ ರಾಣಿ ಎಲಿಜಬೆತ್ II ಆಹಾರವನ್ನು ಮಕ್ಕಳಿಗೆ ನೀಡುವ ಬದಲು ನೆಲಕ್ಕೆ ಎಸೆದಿದ್ದರೆ ? ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಕ್ಯಾಟಲಾಗ್ ಲುಮಿಯೆರ್ ಎಂಬ ಫ್ರೆಂಚ್ ವೆಬ್‌ಸೈಟ್‌ನಲ್ಲಿ  ಸ್ಕ್ರೀನ್‌ಶಾಟ್ ಒಂದು ಲಭ್ಯವಾಗಿದೆ.

ವೆಬ್‌ಸೈಟ್‌ನ ಪ್ರಕಾರ, ಸ್ಕ್ರೀನ್‌ಶಾಟ್ ಗೇಬ್ರಿಯಲ್ ವೆಯರ್ ಅವರ ಚಲನಚಿತ್ರದ ದೃಶ್ಯಗಳಿಂದ ಬಂದಿದ್ದು, ಇದನ್ನು 1899 ಮತ್ತು 1900 ರ ನಡುವೆ ಫ್ರೆಂಚ್ ಇಂಡೋಚೈನಾದ ಅನ್ನಮ್‌ನ ಫ್ರೆಂಚ್ ವಸಾಹತು (ಈಗ ವಿಯೆಟ್ನಾಂ) ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಲನಚಿತ್ರವನ್ನು ಜನವರಿ 20, 1901 ರಂದು ಫ್ರಾನ್ಸ್‌ನ ಲಿಯಾನ್‌ನಲ್ಲಿ “ಇಂಡೋ-ಚೈನಿ ಅನ್ನಾಮೀಸ್ ಮಕ್ಕಳು ಮಹಿಳೆಯರ ಪಗೋಡಾದ ಮುಂದೆ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂಬ ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿರುವ ಮಹಿಳೆಯರು ಮೇಡಮ್ ಪಾಲ್ ಡೌಮರ್ – 1897 ರಿಂದ 1902 ರವರೆಗೆ ಫ್ರೆಂಚ್ ಇಂಡೋಚೈನಾದ ಗವರ್ನರ್-ಜನರಲ್ ಜೋಸೆಫ್ ಅಥಾನಾಸ್ ಪಾಲ್ ಡೌಮರ್ ಅವರ ಪತ್ನಿ – ಮತ್ತು ಅವರ ಮಗಳು ಎಂದು ವೆಬ್‌ಸೈಟ್ ಹೇಳಿದೆ. 1899 ಮತ್ತು 1900 ರ ನಡುವೆ, ಫ್ರೆಂಚ್ ಚಲನಚಿತ್ರ ನಿರ್ಮಾಪಕ ಗೇಬ್ರಿಯಲ್ ವೆಯರ್ ವಿಯೆಟ್ನಾಂನ ಫ್ರೆಂಚ್ ವಸಾಹತುಗಳಾದ್ಯಂತ ಪ್ರಯಾಣಿಸಿದರು. 1900 ರ ಪ್ಯಾರಿಸ್ ಎಕ್ಸ್‌ಪೊಸಿಷನ್ ಯೂನಿವರ್ಸೆಲ್‌ನಲ್ಲಿ ಪ್ರದರ್ಶಿಸಲು ಫ್ರೆಂಚ್ ಸರ್ಕಾರಕ್ಕಾಗಿ ಅವರು ಸುಮಾರು 39 ಚಲನಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಚಿತ್ರೀಕರಿಸಿದರು. ಇದು ರಾಣಿ ಎಲಿಜಬೆತ್ II ಹುಟ್ಟುವ 26 ವರ್ಷಗಳ ಮೊದಲೇ ಚಿತ್ರೀಕರಿಸಲಾಗಿದೆ, ಎನ್ನುವುದು ಗಮನಾರ್ಹ.

ಒಟ್ಟಾರೆಯಾಗಿ ಹೇಳುವುದಾದರೆ, ರಾಣಿ ಎಲಿಜಬೆತ್ II, ಆಫ್ರಿಕನ್ ಮಕ್ಕಳನ್ನು ಭೇಟಿಯಾಗಿದ್ದ ವೇಳೆ ನೆಲಕ್ಕೆ ಆಹಾರವನ್ನು ಎಸೆಯುತ್ತಿದ್ದಾರೆ, ಎಂದು ಫ್ರೆಂಚ್ ಸಿನಿಮಾದ ದೃಶ್ಯಗಳನ್ನು ಹಂಚಿಕೊಂಳ್ಳಲಾಗಿದೆ. ಇದನ್ನು 1899 ಮತ್ತು 1900 ರ ನಡುವೆ ಫ್ರೆಂಚ್ ಇಂಡೋಚೈನಾದ ಅನ್ನಮ್‌ನ ಫ್ರೆಂಚ್ ವಸಾಹತು (ಈಗ ವಿಯೆಟ್ನಾಂ) ನಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ರಾಣಿ ಎಲಿಜಬೆತ್ II ಗೂ ಈ ದೃಶ್ಯಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಾಧು ವೇಷದಲ್ಲಿದ್ದ ಇವರು ಮಕ್ಕಳ ಕಳ್ಳರಲ್ಲ, ಚಿನ್ನ ಕಳ್ಳರು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights