ಸಂಸದೆ ರಕ್ಷಾ ಖಡ್ಸೆಯನ್ನು ‘ಸಲಿಂಗಕಾಮಿ’ ಎಂದು ಬರೆದ BJP ವೆಬ್‌ಸೈಟ್; ಬಿಜೆಪಿ ಮಾಡಿದ ಯಡವಟ್ಟು?
ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಸದೆ ರಕ್ಷಾ ಖಡ್ಸೆ ಅವರನ್ನು ‘ಸಲಿಂಗಕಾಮಿ’ ಎಂದು ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಕ್ಷಾ ಖಡ್ಸೆ ಅವರು ಬಿಜೆಪಿ ಸಂಸದರಾಗಿದ್ದು, ಅವರು ರಾವರ್ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಹಿರಿಯ ಎನ್‌ಸಿಪಿ ಮುಖಂಡ ಏಕ್ನಾಥ್ ಖಡ್ಸೆ ಅವರ ಸೊಸೆ.
ಟ್ವಿಟ್ಟರ್‌ನಲ್ಲಿ ವೆಬ್‌ಸೈಟ್‌ನ ಸ್ಕ್ರೀನ್‌ಗ್ರಾಬ್ ಹಂಚಿಕೊಂಡಿರುವ ದೇಶಮುಖ್, ಬಿಜೆಪಿ ಮಧ್ಯಪ್ರವೇಶಿಸದಿದ್ದರೆ ಖಡ್ಸೆ ಬಗ್ಗೆ ‘ಅವಹೇಳನಕಾರಿ ವಿವರಣೆಯ’ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
“ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಹಾರಾಷ್ಟ್ರದ ಬಿಜೆಪಿ ಸಂಸದೆ ರಕ್ಷಾ ಖಡ್ಸೆ ಅವರ ಬಗ್ಗೆ ಅವಹೇಳನಕಾರಿ ವಿವರಣೆಯನ್ನು ನೋಡಿ ಆಘಾತವಾಗಿದೆ. ಮಹಾ ಸರ್ಕಾರ ಮಹಿಳೆಯರ ಬಗ್ಗೆ ಈ ಅಗೌರವದ ನಡವಳಿಕೆಯನ್ನು ಸಹಿಸುವುದಿಲ್ಲ. ಬಿಜೆಪಿ ಬೇಜವಾಬ್ದಾರಿಯುತ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ಮಹಾರಾಷ್ಟ್ರ ಸೈಬರ್ ಬ್ರಾಂಚ್ ಕ್ರಮಕ್ಕೆ ಮುಂದಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೂಗಲ್ ಅನುವಾದದಿಂದಾಗಿ ಈ ರೀತಿ ವೈಫಲ್ಯ ಉಂಟಾಗಿದೆ. ಬಿಜೆಪಿಯ ಅಧಿಕೃತ ವೆಬ್‌ಸೈಟ್ನಲ್ಲಿ ವೀಕ್ಷಕರಿಗೆ ತಮ್ಮ ವಿಷಯವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೋಡುವ ಆಯ್ಕೆಯನ್ನು ನೀಡಲಾಗಿದೆ. ಆ ಸಂದರ್ಭದಲ್ಲಿ ಈ ಎಡವಟ್ಟು ಸಂಭವಿಸಿದೆ ಎಂದು ಹೇಳಲಾಗಿದೆ.
ಹಿಂದಿಯಲ್ಲಿ, ಖಡ್ಸೆ ಅವರ ಕ್ಷೇತ್ರಕ್ಕೆ ರಾವರ್ ಎಂದು ಹೆಸರಿಡಲಾಗಿದೆ. ಇದನ್ನು ಇಂಗ್ಲಿಷ್‌ನಿಂದ ಹಿಂದಿಗೆ ಅನುವಾದಿಸಿದಾಗ, ‘ರಾವರ್’ ಪದವು ‘ಸಲಿಂಗಕಾಮಿ (Homosexual)’ ಎಂದು ಅನುವಾದವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ನಮ್ಮೊಂದಿಗೆ ಮಂತ್ರಿಗಳಿದ್ದಾರೆ’ ಎಂದಿದ್ದ ಅರ್ನಾಬ್: ಸೋರಿಕೆಯಾದ ಚಾಟ್‌ಗಳಿಂದ BJP ದೂರಉಳಿದಿದ್ಯಾಕೆ?

