ಮಹಾರಾಷ್ಟ್ರ ಹೆದ್ದಾರಿಯಲ್ಲಿ ಗನ್ ತೋರಿಸಿ ನುಗ್ಗಿದ ಶಿವಸೇನಾ ಸ್ಟಿಕ್ಕರ್ ಹೊಂದಿದ ಕಾರು..!

ಟ್ರಕ್ ಚಾಲಕನಿಗೆ ಶಿವಸೇನಾ ಸ್ಟಿಕ್ಕರ್ ಹೊಂದಿದ ಕಾರು ಚಾಲಕ ಗನ್ ತೋರಿಸಿ ಅಡ್ಡ ನುಗ್ಗಿದ ಘಟನೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದಿದೆ.

ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಮ್ಮ ವಾಹನವನ್ನು ಮುನ್ನುಗ್ಗಿಸುವ ಪ್ರಯತ್ನದಲ್ಲಿ ದಾರಿ ಬಿಡದವರಿಗೆ ಗನ್ ತೋರಿಸಿದ್ದಾರೆಂದು ಔರಂಗಾಬಾದ್‌ನ ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಟ್ವೀಟ್ ಮಾಡಿದ್ದು, ಇವರ ವಿರುದ್ಧ ದೂರು ಕೊಟ್ಟಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಶಿವಸೇನೆಗೆ ಸೇರಿದವರು ಎಂದು ಜಲೀಲ್ ಹೇಳಿದ್ದಾರೆ.

ತಮ್ಮ ವಾಹನಕ್ಕೆ ದಾರಿ ಬಿಡಲು ಇಬ್ಬರು ಪುರುಷರು ಟ್ರಕ್ ಡ್ರೈವರ್ ಗೆ ಕಾರಿನ ಕಿಟಕಿಯಿಂದ ಗನ್ ತೋರಿಸಿದ್ದಾರೆ. ಟ್ರಕ್ ಚಾಲಕ ಗನ್ ಕಂಡು ಮುಂದೆ ಹೋಗದೇ ನಿಂತ ನಂತರ ಕಾರು ಸ್ಥಳದಿಂದ ವೇಗವಾಗಿ ಮುಂದೆ ಹೋಗುತ್ತದೆ. ಅವರ ವಾಹನದ ಹಿಂಭಾಗದ ವಿಂಡ್ ಷೀಲ್ಡ್ ಶಿವಸೇನೆಯ ಲಾಂಛನವಾದ ಸ್ನಾರ್ಲಿಂಗ್ ಹುಲಿ ಮುಖದ ಸ್ಟಿಕ್ಕರ್ ಹಚ್ಚಿರುವುದು ಕಾಣಬಹುದು.

ಜಲೀಲ್ ಅವರು ತಮ್ಮ ಟ್ವೀಟ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿ, ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಅವರನ್ನು ಟ್ಯಾಗ್ ಮಾಡಿದ್ದಾರೆ.

ಮುಂಬೈ ದಕ್ಷಿಣದ ಶಿವಸೇನೆ ಲೋಕಸಭಾ ಸಂಸದ ಮತ್ತು ಪಕ್ಷದ ವಕ್ತಾರ ಅರವಿಂದ ಸಾವಂತ್ ಅವರಿಗೆ ಘಟನೆಯ ಬಗ್ಗೆ ಕೇಳಿದಾಗ, “ಕಾನೂನಿನ ಮುಂದೆ ಎಲ್ಲರೂ ಸಮಾನರು. ಪೊಲೀಸರು ತನಿಖೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಈಗಾಗಲೇ ನೆರೆಯ ರಾಯ್ಗಡ್ ಜಿಲ್ಲೆಯ ಖೋಪೋಲಿಯಲ್ಲಿ ಗನ್ ತೋರಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3/25 ರ ಅಡಿಯಲ್ಲಿ ಅವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಟ್ರಕ್ ಚಾಲಕನಿಗೆ ಶಸ್ತ್ರಾಸ್ತ್ರಗಳನ್ನು ತೋರಿಸಿದ ವಾಹನ ಮತ್ತು ಅದರ ಚಾಲಕರನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆ.

ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಪೊಲೀಸರು ವಾಹನದ ಮಾಲೀಕರ ಬಗ್ಗೆ ಸಾರಿಗೆ ಇಲಾಖೆಯಿಂದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights