ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನಗಳಿಗೆ ಡಿಕ್ಕಿ: ಆತಂಕ
ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಸಾವನ್ನಪ್ಪಿದ ರೈತನ ಮನೆಗೆ ಭೇಟಿ ನೀಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ವಾಹನಗಳು ಅಪಘಾತಕ್ಕೆ ಸಿಲುಕ್ಕಿದ್ದು, ಆತಂಕ ಸೃಷ್ಟಿಯಾಗಿದೆ.
ಉತ್ತರ ಪ್ರದೇಶದ ಹಾಪುರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಿಯಾಂಕಾ ಗಾಂಧಿ ಅವರ ನಾಲ್ಕು ಬೆಂಗಾವಲ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ.
ಘಟನೆಯಲ್ಲಿ ಯಾವುದೇ ಅಪಾಯವಾಗಲೀ, ಭದ್ರತಾ ಸಿಬ್ಬಂದಿಗೆ ಗಾಯಗಳಾಗಲಿ ಆಗಿಲ್ಲ. ಕಾರುಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬ್ಯಾರೀಕೇಡ್ ಬೇಧಿಸಿ ಮುಂದೆ ಹೋಗಲು ಪ್ರಯತ್ನಿಸಿದಾಗ ಟ್ರಾಕ್ಟರ್ ಪಲ್ಟಿಯಾಗಿ, ಟ್ರಾಕ್ಟರ್ ಚಾಲನೆ ಮಾಡುತ್ತಿದ್ದ ರೈತ ನವನೀತ್ ಸಿಂಗ್ ಸಾವನ್ನಪ್ಪಿದ್ದರು. ಅವರ ಕುಟುಂಬವನ್ನು ಭೇಟಿಯಾಗಲು ಇಂದು ಪ್ರಿಯಾಂಕಾ ಗಾಂಧಿ ರಾಂಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿದೆ.
ಇದಕ್ಕೂ ಮುನ್ನ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕೆಆರ್ ಲಲ್ಲು ಅವರು, “ಕೆನಡಾದಿಂದ ಬಂದು ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ನವನೀತ್ ಸಿಂಗ್ ಅವರಿಗೆ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪೊಲೀಸರು ಗುಂಡು ಹಾರಿಸಿದ್ದರು. ಇದರಿಂದಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಪ್ರಿಯಾಂಕಾ ಗಾಂಧಿ ಅವರು ಇಂದು ರಾಂಪುರದ ಅವರ ನಿವಾಸದಲ್ಲಿ ಅವರ ಕುಟುಂಬವನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ದೀಪ್ ಸಿಧು ಅಮಿತ್ ಶಾ ಛತ್ರಿಯಡಿ ಅವಿತುಕೊಂಡಿರಬಹುದು : ರಮ್ಯಾ ವ್ಯಂಗ್ಯ!