ರಜನಿ ರಾಜಕೀಯಕ್ಕೆ : ಅಭಿಮಾನಿಗಳ ಕನಸಿಗೆ ಜೀವ ತುಂಬಿದ ರಜನಿ ಆಪ್ತರ ಹೇಳಿಕೆ….

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ಸುದ್ದಿ ಹೊಸದೇನಲ್ಲ. ಬಹುಶ: ಈ ವಿಚಾರ ಕೇಳಿ ಕೇಳಿ ಕೆಲವೊಂದಿಷ್ಟು ಮಂದಿಗೆ ನಿರೀಕ್ಷೆ ಹುಸಿಯಾಗಿ ಬೇಸರ ಬಂದಿರಬಹುದೇನೋ. ರಜನಿ ರಾಜಕೀಯಕ್ಕೆ… ರಜನಿ ರಾಜಕೀಯಕ್ಕೆ… ಟೈಟಲ್ ನೋಡಿ ಓದಿ ಕೆಲ ಮಂದಿ ಅಯ್ಯೋ ಬಿಡಪ್ಪಾ ಬಂದಾಗ ನೋಡಿದ್ರಾಯ್ತು ಅಂತ ಸುಮ್ನಾಗಿರಬೇಕು. ಆದರೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾವು ಸದ್ಯ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಿ ಒಂದು ತಿಂಗಳ ಬಳಿಕ ಮತ್ತೊಂದು ಆಪ್ತರ ಹೇಳಿಕೆ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹೌದು.. ರಜನಿ ಅವರು ಸದ್ಯಕ್ಕೆ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆಯೇ ಹೊರತು , ಎಂದಿಗೂ ರಾಜಕಾರಣಕ್ಕೆ ಇಳಿಯುದಿಲ್ಲ ಎಂದು ಹೇಳಿಲ್ಲ ಎಂದು ಅವರ ಆಪ್ತರಾಗಿರುವ ತಮಿಳರುವಿ ಮಣಿಯನ್ ಹೇಳಿರುವುದು ಚರ್ಚೆಗಳಿಗೆ ಕಾರಣವಾಗಿದೆ.

ಒಂದು ವೇಳೆ ಮುಂಬರುವ ದಿನಗಳಲ್ಲಿ ರಜನಿಕಾಂತ್ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರೆ ತಮ್ಮ ನೇತೃತ್ವದ ಸಂಘಟನೆ ಗಾಂಧಿಯ ಮಕ್ಕಳ್ ಇಯಕ್ಕಮ್ ಕೂಡ ಅವರ ಜತೆಗೂಡಲಿದೆ. ಒಂದು ವೇಳೆ ಅವರು ರಾಜಕೀಯದಿಂದ ದೂರವೇ ಉಳಿದರೆ ಸೋದರ ಸಂಘಟನೆಯಾಗಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.

ರಜನಿಕಾಂತ್ ಸ್ಥಾಪಿಸಿದ್ದ ರಜನಿ ಮಕ್ಕಳ್ ಮಂದ್ರಂ ಸಂಘಟನೆಯಿಂದ ಪದಾಧಿಕಾರಿಗಳನ್ನು ಸೆಳೆಯಲು ರಾಜಕೀಯ ಶಕ್ತಿಗಳು ಈಗಾಗಲೇ ಪ್ರಯತ್ನಿಸುತ್ತಿವೆ. ಮಾತ್ರವಲ್ಲ ಈಗಾಗಲೇ ಕೆಲವರು ರಾಜಕೀಯಕ್ಕೆ ಸೇರ್ಪಡೆ ಕೂಡ ಆಗಿದ್ದಾರೆ. ಇನ್ನಷ್ಟುಮಂದಿ ಎಸ್ಕೇಪ್ ಆಗಲೂ ನೋಡುತ್ತಿದ್ದಾರೆ. ಈ ಸಂದರ್ಭದ ಲಾಭ ಪಡೆಯಲು ತಾವು ಯತ್ನಿಸುವುದಿಲ್ಲ. ರಜನಿ ಸಂಘಟನೆಯ ಸಭೆಯನ್ನು ಮಾ.7ರಂದು ತಿರುಪುರ್ ನಲ್ಲಿ ನಡೆಸುತ್ತೇವೆ. ರಜನಿಕಾಂತ್ ಅವರು ಇನ್ನೂ ಮಂದ್ರಂ ಸಂಘಟನೆಯನ್ನು ವಿಸರ್ಜಿಸಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ರಜನಿ ಹೊಸ ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಆದರೆ ಸಿನಿಮಾ ಶೂಟಿಂಗ್ ವೇಳೆ ಕೊರೊನಾ ವೈರಸ್ ಗೆ ತುತ್ತಾದ ರಜನಿ ಅವರು ತಾವು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದಿದ್ದರು. ಇದರಿಂದ ಭಾರೀ ಕುತೂಹಲದಿಂದ ರಜನಿ ರಾಜಕೀಯ ಪ್ರವೇಶವನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಮತ್ತೊಮ್ಮೆ ಯೋಚಿಸಲು ಅಭಿಮಾನಿಗಳು ಮನವಿ ಕೂಡ ಮಾಡಿಕೊಂಡಿದ್ದರು. ಆದರೀಗ ಆಪ್ತರ ಹೇಳಿಕೆ ಮತ್ತೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights