ಲಾಕ್‌ಡೌನ್: ಬಿಹಾರದಲ್ಲಿ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ!
ಕೊರೊನಾ ಲಾಕ್‌ಡೌನ್ ಪರಿಣಾಮದಿಂದ ಬಿಹಾರದ ವಿವಿಧ ಜಿಲ್ಲೆಗಳ ಸುಮಾರು 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ ಎಂದು ರಾಜ್ಯದ ಅಧಿಕೃತ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಸರ್ಕಾರಿ ಶಾಲೆಗಳಲ್ಲಿ 5 ರಿಂದ 6 ನೇ ತರಗತಿಗೆ ದಾಖಲಾದ 6 ಲಕ್ಷ ಮಕ್ಕಳು, 8 ಮತ್ತು 9 ನೇ ತರಗತಿಯ 4 ಲಕ್ಷ ಮಕ್ಕಳು ಶಾಲೆಗಳನ್ನು ತೊರೆದಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ವಿದ್ಯಾರ್ಥಿಗಳನ್ನು ಮತ್ತೆ ತರಗತಿಗಳಿಗೆ ಕರೆತರಲು ಬಿಹಾರ ಸರ್ಕಾರದ ಶಿಕ್ಷಣ ಇಲಾಖೆ ಏಪ್ರಿಲ್ 1 ರಿಂದ ರಾಜ್ಯಾದ್ಯಂತ ‘ದಾಖಲಾತಿ ಪ್ರಕ್ರಿಯೆ’ ಪ್ರಾರಂಭಿಸಲು ನಿರ್ಧರಿಸಿದೆ.
ಈ ಮಾಹಿತಿಯನ್ನು ಪ್ರಕಟಿಸಿದ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಂಜಿತ್ ಕೆ ಸಿಂಗ್, “ಎಲ್ಲಾ ಡ್ರಾಪ್ ಔಟ್‌ಗಳನ್ನು ಮತ್ತೆ ಶಾಲೆಗೆ ಕರೆತರುವ ವಿಶೇಷ ದಾಖಲಾತಿ ಪ್ರಕ್ರಿಯೆಗೆ ಚಾಲನೆಯನ್ನು ಏಪ್ರಿಲ್‌ನಿಂದ ಕೈಗೊಳ್ಳಲಾಗುವುದು. ಪ್ರಾಥಮಿಕ ಹಂತದಿಂದ ಪ್ರೌಢ ಶಾಲಾ ಹಂತದ ಶಾಲಾ ಮುಖ್ಯೋಪಾಧ್ಯಾಯರಿಗೆ ವಿದ್ಯಾರ್ಥಿಗಳ ಹೊರಗುಳಿಯುವಿಕೆಯನ್ನು ಕಡಿಮೆ ಮಾಡಲು ದೊಡ್ಡ ಪ್ರಮಾಣದಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಕೆಲಸವನ್ನು ನೀಡಲಾಗಿದೆ” ಎಂದು ಹೇಳಿದರು.
“ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೇತುಬಂಧ-ಕೋರ್ಸ್‌ಗಳನ್ನು ನಡೆಸಲು ನಾವು ನಿರ್ಧರಿಸಿದ್ದೇವೆ, ರಾಜ್ಯದಲ್ಲಿ ಲಾಕ್‌ಡೌನ್ ಇದ್ದುದರಿಂದ ಪಾಠಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಎಲ್ಲಾ ತರಗತಿಗಳಿಗೆ ಸೇತುಬಂಧ ಕೋರ್ಸ್ ಏಪ್ರಿಲ್ ಮತ್ತು ಜೂನ್ ನಡುವೆ ಮೂರು ತಿಂಗಳು ಮುಂದುವರಿಯಲಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಮಹಿಳೆಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾ; ಅಧಿಕಾರಿಗೆ 25,000 ದಂಡ ವಿಧಿಸಿದ ಹೈಕೋರ್ಟ್!

