ವಸತಿ ಸಮುಚ್ಛಯ ಸೇರಿ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ ಕಡ್ಡಾಯ: ಡಿಸಿಎಂ

ವಸತಿ ಸಮುಚ್ಛಯಗಳು ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲ ಸೋಮವಾರ ಬೆಳಿಗ್ಗೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಯ ಬಗ್ಗೆ ಹಾರ್ವರ್ಡ್‌ ಇಂಡಿಯಾ ಕಾನ್ಫರೆನ್ಸ್‌ ವತಿಯಿಂದ ಏರ್ಪಡಿಸಲಾಗಿದ್ದ ‘ಭವಿಷ್ಯದತ್ತ ಸುಸ್ಥಿರ ಸಾರಿಗೆ’ ವರ್ಚುಯಲ್‌ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಎಲೆಕ್ಟ್ರಿಕ್‌ ವಾಹನಗಳನ್ನು ಒದಗಿಸಿದರಷ್ಟೇ ಸಾಲದು. ಎಲ್ಲೆಡೆಯೂ ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳುವಂಥ ವ್ಯವಸ್ಥೆ ಇರಲೇಬೇಕು ಎಂದರು.

ಮುಂದಿನ ದಿನಗಳಲ್ಲಿ ಬ್ಯಾಟರಿ ವಾಹನಗಳು ಮಾರುಕಟ್ಟೆಗೆ ಬರಲಿವೆ. ಗ್ರಾಹಕರು ಬ್ಯಾಟರಿಗಳನ್ನು ಬಾಡಿಗೆಗೆ ಪಡೆದು ಆ ವಾಹನಗಳನ್ನು ಚಲಾಯಿಸಿಕೊಂಡು ಹೋಗಬಹುದು. ಎಲ್ಲೆಡೆ ಪೆಟ್ರೋಲ್‌ ಬಂಕ್‌ಗಳಂತೆ ಬ್ಯಾಟರಿ ಬಂಕ್‌ಗಳೂ ತಲೆಎತ್ತಲಿವೆ. ಆಗ ಗ್ರಾಹಕನಿಗೆ ಕಡಿಮೆ ದರದಲ್ಲಿ ವಾಹನವೂ ದೊರೆಯಲಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಗ್ರಾಹಕನು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅವರು ನುಡಿದರು.

ಸಬ್ಸಿಡಿ ನೀಡಲಾಗಿದೆ:

ವಾಹನ ಮಾಲಿನ್ಯವನ್ನು ಸಂಪೂರ್ಣ ತೊಡೆದುಹಾಕಲು ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಲೇಬೇಕು. ಅದಕ್ಕೆ ಬೇಕಾದ ಸಬ್ಸಿಡಿ, ರಿಯಾಯಿತಿ ವಿದ್ಯುತ್‌ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶದಲ್ಲೇ ಮೊತ್ತ ಮೊದಲಿಗೆ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಅನುಷ್ಠಾನಕ್ಕೆ ತಂದಿರುವ ಕರ್ನಾಟಕವು ಹೊಗೆರಹಿತ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ಎಲೆಕ್ಟ್ರಿಕ್‌ ವಾಹನಗಳಿಗೆ ವಾಣಿಜ್ಯ ಬಳಕೆ ವಿದ್ಯುತ್‌ಗಿಂತ ಅಗ್ಗದ ದರದಲ್ಲಿ ವಿದ್ಯುತ್‌ ನೀಡಲಾಗುತ್ತಿದೆ. ಮುಂದೆಯೂ ಈ ಸೌಲಭ್ಯ ಇರುತ್ತದೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗಣನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಸ್ತೆ, ವಿದ್ಯುತ್‌, ನೀರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಕ ಸುಧಾರಣೆಗಳನ್ನು ತರಲಾಗಿದೆ ಎಂದು ಡಿಸಿಎಂ ಹೇಳಿದರು.

ಎಲೆಕ್ಟ್ರಿಕ್‌ ವಾಹನ ತಯಾರಿಕೆ ಹಾಗೂ ಅದಕ್ಕೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪನೆಗೆ ಸರಕಾರ ಹೆಚ್ಚು ಬೆಂಬಲ ನೀಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ ಎಂದ ಅವರು, ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಕರ್ನಾಟಕವು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಗೋಷ್ಠಿಯಲ್ಲಿ ಸಿಡಿಪಿಕ್ಯೂ ಗ್ಲೋಬಲ್‌ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷೆ ಅನಿತಾ ಜಾರ್ಜ್‌, ಉದ್ಯಮಿ ವಿಘ್ನೇಶ್‌ ನಂದಕುಮಾರ್‌ ಹಾಗೂ ಬಿನಾಯ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಹ ಸಂಸ್ಥಾಪಕ ವಿಭು ಬಿನಾಯ್‌ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights