ಟಿಪ್ಪು ಜಯಂತಿ ವಿವಾದ: ಸಿ.ಟಿ ರವಿ ಮತ್ತು ಅನಂತ್‌ಕುಮಾರ್ ಹೆಗಡೆ ವಿರುದ್ಧ ದೂರು ಪರಿಗಣಿಸಲು ಹೈಕೋರ್ಟ್‌ ಸೂಚನೆ!

ಟಿಪ್ಪು ಜಯಂತಿಯ ಸಂದರ್ಭದಲ್ಲಿ ಬಿಜೆ‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಮತ್ತು ಸಂಸದ ಅನಂತಕುಮಾರ ಹೆಗಡೆ ನೀಡಿದ್ದ ವಿವಾದಾತ್ಮಕ ಹೇಳಿಕೆಯ ವಿರುದ್ಧ ದಾಖಲಿಸಲಾಗಿದ್ದ ಖಾಸಗಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಯೋಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಈ ಇಬ್ಬರೂ ಬಿಜೆಪಿ ನಾಯಕರು ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗಳು ಧರ್ಮಗಳ ನಡುವೆ ದ್ವೇಷವನ್ನು ಹೆಚ್ಚಿಸುತ್ತವೆ ಎಂದು ಉದ್ಯಮಿ ಆಲಂ ಪಾಷಾ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ, ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ಹೇಳಿತ್ತು. ಅಲ್ಲದೆ, ದೂರನ್ನು 2017ರ ನವೆಂಬರ್‌ 04 ರಂದು ವಜಾಗೊಳಿಸಿತ್ತು.

ಇದೀಗ ಮತ್ತೆ ಆ ದೂರು ಹೈಕೋರ್ಟ್‌ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ, ‘‍ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಶ್ನೆ ಉದ್ಭವಿಸುತ್ತದೆ. ಸಿಆರ್‌ಪಿಸಿ 196 (1) ಮತ್ತು (1–ಎ) ಸೆಕ್ಷನ್‌ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಂಗೀಕರಿಸಿದೆ’ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಕಾನೂನಿನ ಪ್ರಕಾರ ಹೊಸದಾಗಿ ದೂರನ್ನು ಪರಿಗಣಿಸಬೇಕು. ಮತ್ತೆ ವಿಚಾರಣೆ ನಡೆಸಬೇಕು ಎಂದು ತಿಳಿಸಿದೆ.

Read Also: ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ; ಸರ್ಕಾರ ರಚನೆಗೆ BJP ಹಿಂದೇಟು; ರಾಷ್ಟ್ರಪತಿ ಆಡಳಿತ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights