ಪ್ರಧಾನಿ ಮೋದಿಗೆ ಧೈರ್ಯವಿಲ್ಲ – ಹೆದರುತ್ತಾರೆ ಎಂದು ಚೀನೀಯರು ಅರ್ಥಮಾಡಿಕೊಂಡಿದ್ದಾರೆ: ರಾಹುಲ್‌ಗಾಂಧಿ
ಚೀನಾ-ಭಾರತದ ಗಡಿ ವಿದಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಯಭೀತರಾಗಿದ್ದಾರೆ ಎಂಬುದನ್ನು ಚೀನಾ ತಿಳಿದಿದೆ. ದೇಶದ ಪೂರ್ವದಲ್ಲಿರುವ ನೆರೆಹೊರೆ (ಚೀನಾ)ಯವರನ್ನು ಕಂಡರೆ ಮೋದಿ ಹೆದರುತ್ತಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ಪ್ರವಾಸ ನಡೆಸುತ್ತಿರುವ ರಾಹುಲ್‌ಗಾಂಧಿ, ವಕೀಲರೊಂದಿಗೆ ಸಭೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಮೋದಿ ಮತ್ತು ಅಮಿತ್ ಶಾ ವಿರುದ್ಧ ನೀಡಿದದ್ದ “ಹಮ್ ಡು ಹಮರೆ ಡು” (ನಾವಿಬ್ಬರು ನಮಗಿಬ್ಬರು) ಎಂಬ ಹೇಳಿಕೆಯನ್ನು ಮತ್ತೆ ಉಚ್ಚರಿಸಿದ್ದಾರೆ.
“ಚೀನಾ ಮತ್ತು ಭಾರತದ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದಾಗ, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮೋದಿ, ಭಾರತದೊಳಗೆ ಯಾರೂ ಪ್ರವೇಶಿಸಿಲ್ಲ ಎಂದು ಹೇಳಿದ್ದರು. ಇದು ಚೀನಾದವರಿಗೆ ಭಾರತದ ಪ್ರಧಾನ ಮಂತ್ರಿ ಭಯಭೀತರಾಗಿದ್ದಾರೆಂದು ಸೂಚಿಸುತ್ತದೆ. ಇದನ್ನು ಚೀನಿಯರೂ ಅರ್ಥಮಾಡಿಕೊಂಡಿದ್ದಾರೆ” ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಜಾರಿ ಇಲ್ಲ: ರಾಹುಲ್‌ಗಾಂಧಿ
“ಭಾರತದ ಪ್ರಧಾನ ಮಂತ್ರಿ ಚೀನಾದ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂದು ಚೀನಿಯರಿಗೆ ತಿಳಿದಿದೆ. ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ನಮಗೆ ಅತ್ಯಂತ ಮುಖ್ಯವಾದ ಭೂಮಿಯಾಗಿರುವ ಡೆಪ್ಸಾಂಗ್‌ನಲ್ಲಿರುವ ನಮ್ಮ ಭೂಪ್ರದೇಶವನ್ನು ಈ ಸರ್ಕಾರ ಭಾರತಕ್ಕೆ ಮರಳಿ ಪಡೆಯುವುದಿಲ್ಲ. ಇವರ ಆಳ್ವಿಕೆಯಲ್ಲಿ ಭಾರತವು ಆ ಪ್ರದೇಶವನ್ನು ಕಳೆದುಕೊಳ್ಳಲಿದೆ” ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ “ಯಾವುದೇ ಹಿಂಜರಿಕೆಯಿಲ್ಲದೆ ಯಾವಾಗಲೂ ಚೀನಿಯರೊಂದಿಗೆ ವ್ಯವಹರಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚೀನಿಯರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. 2013 ರಲ್ಲಿ ಚೀನಿಯರು ಭಾರತಕ್ಕೆ ಪ್ರವೇಶಿಸಿದಾಗಲೂ ನಾವು ಕ್ರಮ ಕೈಗೊಂಡಿದ್ದೇವೆ. ಅವರನ್ನು ಬಲವಂತವಾಗಿ ರಾಜಿ ಮಾಡಿಕೊಳ್ಳಲು ಒತ್ತಾಯಿಸಿದ್ದೇವೆ. ಅಲ್ಲದೆ, ನಾವು ಇತರ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದೇವೆ” ಎಂದು ಅವರು ಹೇಳಿದರು.
“ಪ್ರಧಾನ ಮಂತ್ರಿಗೆ ಧೈರ್ಯವಿಲ್ಲ ಎಂದು ಚೀನೀಯರು ಈಗ ಅರ್ಥಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ರಾಜಿ ಮಾಡಿಕೊಳ್ಳಲಿದ್ದಾರೆ ಎಂದು ಚೀನಿಯರಿಗೆ ತಿಳಿದಿದೆ” ಎಂದು ಅವರು ಮತ್ತೊಮ್ಮೆ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ದಾಟಲ್ಲ; ಗೆದ್ದರೆ ಟ್ವಿಟರ್‌ಗೆ ಗುಡ್-ಬೈ; ಪುನರುಚ್ಚರಿಸಿದ ಪ್ರಶಾಂತ್ ಕಿಶೋರ್