ಶಾಕಿಂಗ್‌ ನ್ಯೂಸ್‌: ವಸತಿ ಶಾಲೆಯ 317 ವಿದ್ಯಾರ್ಥಿನಿಯರ ಅಪಹರಣ; ಬಾಲಕಿಯರ ರಕ್ಷಣೆಗೆ ಕಾರ್ಯಾಚರಣೆ!

ಫೆಬ್ರವರಿ 26ರಂದು ಹೆಣ್ಣು ಮಕ್ಕಳ ವಸತಿ ಶಾಲೆಯೊಂದರಲ್ಲಿ 317 ಬಾಲಕಿಯನ್ನು ಅಪಹರಿಸಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ನಡೆದಿದೆ. ವಿದ್ಯಾರ್ಥಿನಿಯರ ರಕ್ಷಣೆಗೆ ಪೊಲೀಸ್‌-ಸೇನಾಪಡೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಉತ್ತರ ನೈಜೀರಿಯಾದ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ವಸತಿ ಶಾಲೆಯ 317 ವಿದ್ಯಾರ್ಥಿನಿಯರನ್ನು ಬಂದೂಕುಧಾರಿಗಳ ತಂಡವೊಂದು ಅಪಹರಣ  ಮಾಡಿದ್ದಾರೆ. ಅಪಹರಿಸಲಾಗಿರುವ ಬಾಲಕಿಯರನ್ನು ರಕ್ಷಿಸಲು ಪೊಲೀಸ್‌ ಮತ್ತು ಮಿಲಿಟರಿ ಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ಎಂದು ಪೊಲೀಸ್ ವಕ್ತಾರ ಮೊಹಮ್ಮದ್‌ ಶೇಷು ಮಾಹಿತಿ ನೀಡಿದ್ದಾರೆ.

ಬಾಲಕಿಯ ಅಪಹರಣದ ಬಗ್ಗೆ ವಿಶಸಂಸ್ಥೆಯ ಮುಖ್ಯಸ್ಥ ಆಂಟೋನಿಯೋ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದು, “ನೈಜೀರಿಯಾದಲ್ಲಿನ ಮಾಧ್ಯಮಿಕ ಶಾಲೆಯೊಂದರಿಂದ 300 ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಅಪಹರಿಸಿರುವ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಇದು ಮಾನವಹಕ್ಕುಗಳ ಉಲ್ಲಂಘನೆಯಾಗಿದೆ. ಆ ಹೆಣ್ಣುಮಕ್ಕಳನ್ನು ಆದಷ್ಟು ಬೇಗ ಅವರ ಕುಟುಂಬಗಳಿಗೆ ಹಿಂದಿರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಹಣಕ್ಕಾಗಿ ಮುಗ್ಧ ಶಾಲಾ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡುಕೋರರಿಗೆ ನಾವು ಹೆದರುವುದಿಲ್ಲ. ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುತ್ತೇವೆ. ಅದಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ” ಎಂದು ನೈಜೀರಿಯಾದ ಅಧ್ಯಕ್ಷ ಮೊಹಮ್ಮದು ಬುಹಾರಿ ಹೇಳಿದ್ದಾರೆ.

“ನನ್ನ 10 ಮತ್ತು 13 ವರ್ಷದ ಮಕ್ಕಳಿಬ್ಬರನ್ನೂ ಅಪಹರಿಸಲಾಗಿದೆ. ಶಾಲೆಯ ಬಳಿ ಬೃಹತ್‌ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂಬುದು ನಿರಾಶಾದಾಯಕವಾಗಿದೆ” ಎಂದು ಪೋಷಕರೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಳಚಿ ಬಿದ್ದ ವಿಮಾನದ ಭಾಗಗಳು: ಎಮರ್ಜೆನ್ಸಿ ಲ್ಯಾಂಡಿಂಗ್ ಮೂಲಕ 231 ಪ್ರಯಾಣಿಕರ ರಕ್ಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights