ಫ್ಯಾಕ್ಟ್‌ಚೆಕ್: ಹಿಂದೂಗಳನ್ನೂ ಮುಗಿಸಲು ಡ್ಯಾಂನಿಂದ ನೀರು ಬಿಟ್ಟ ಮಮತಾ ಬ್ಯಾನರ್ಜಿ? ವಾಸ್ತವವೇನು?

ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ “ಮಮತಾ ಬ್ಯಾನರ್ಜಿ” ಹಿಂದೂಗಳ ಮೇಲೆ ಹತ್ಯಾಕಾಂಡ ನಡೆಸಿದ್ದಾರೆ. ದುರ್ಗಾ ದೇವಿ ಮೂರ್ತಿ ವಿಸರ್ಜನೆ ವೇಳೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನದಿಗೆ ಇದ್ದ ದೊಡ್ಡ ಅಣೆಕಟ್ಟಿನ ಗೇಟ್‌ಗಳನ್ನು ಪ್ಲಾನ್ ಮಾಡಿ ತೆರೆಸಿ ದುರ್ಗಾಪೂಜೆಯಲ್ಲಿ ಭಾಗವಹಿಸಿ ದ ಹಿಂದೂಗಳನ್ನು ಕೊಲ್ಲುವ ಉದ್ದೇಶದಿಂದ ನೀರು ಬಿಡುಗಡೆ ಮಾಡಿದೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಬಂಗಾಳದ ಸಾಂಸ್ಕೃತಿಕವಾಗಿ ದೊಡ್ಡ ಹಬ್ಬವಾದ ವಿಗ್ರಹ ವಿಸರ್ಜನೆಯ ದಿನವೇ ಈ ಅಣೆಕಟ್ಟಿನಿಂದ ನದಿ ನೀರು ಬಿಡುಗಡೆ ಮಾಡಿದ್ದ ಉದ್ದೇಶವಾದರೂ ಏನು? ಇದು ಹಿಂದೂಗಳನ್ನು ಕೊಲ್ಲುವ ಉದ್ದೇಶವಲ್ಲದೇ ಬೇರೆನು ಎಂಬ ಪ್ರಶ್ನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದೆ. ಈ ಘಟನೆಯಲ್ಲಿ ಅನೇಕ ಹಿಂದೂಗಳು ಸತ್ತರು ಮತ್ತು ಹಲವು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಲವು ಫೇಸ್‌ಬುಕ್ ಬಳಕೆದಾರರು ಇದೇ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅದರಲ್ಲಿ ಮುಖ್ಯವಾಗಿ ಬಲಪಂಥೀಯ ಪ್ರತಿಪಾದಕ ಪೇಜ್‌ಗಳಾದ ನಿಲುಮೆ, ಹಿಂದೂರಾಷ್ಟ್ರ ಪೇಜ್‌ಗಳು ಸೇರಿವೆ “ಹಿಂದೂಗಳೇ, ನೀವು ಯಾವ ನಾಯಕ ಅಥವಾ ಪಕ್ಷಗಳ ನಂಬಿ ಕುಳಿತುಕೊಳ್ಳುತ್ತೀರಿ, ನೀವು ಜಾಗೃತರಾಗಿ ಸಂಘಟಿತರಾಗದಿದ್ದರೆ, ನಿಮ್ಮ ನಾಶ ಖಚಿತ ಎಚ್ಚರ ಎಂಬ ಒಕ್ಕಣೆಯನ್ನು ಸೇರಿಸಿ ಹಂಚಿಕೊಳ್ಳಲಾಗಿದೆ “. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಹೇಳಿರುವಂತೆ ಪಶ್ಚಿಮ ಬಂಗಾಳದ ಸರ್ಕಾರ ಹಿಂದೂಗಳನ್ನು ಕೊಲ್ಲಲು ಯೋಜನೆ ಮಾಡಿದಿಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೋ ಪೋಸ್ಟ್‌ಗೆ ಸಂಬಂಧಿಸಿದಂತೆ ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಈ ದುರ್ಘಟನೆಯ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರದ ಪಾತ್ರ ಇದೆಯ ಎಂದು ಪರಿಶೀಲಿಸಲು ಫ್ಯಾಕ್ಟ್‌ಚೆಕ್ ನಡೆಸಿದಾಗ ವೈರಲ್ ಪೋಸ್ಟ್‌ನಲ್ಲಿ ಮಾಡಲಾಗಿರುವ ಆಪಾದನೆ ಹಿಂದಿರುವ ವಾಸ್ತವ ಬೇರೆಯೇ ಇದೆ.

ಘಟನೆಗೆ ಸಂಬಂಧಿಸಿದಂತೆ ನವರಾತ್ರಿ ಮುಗಿದು ವಿಜಯದಶಮಿಯ ಬುಧವಾರದಂದು ಅಕ್ಟೋಬರ್ 5 ರಂದು ದುರ್ಗಾ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದರು ಎಂದು ANI ವರದಿ ಮಾಡಿತ್ತು.

ಜಲ್ಪೈಗುರಿಯ ಮಲ್ಬಜಾರ್‌ನಲ್ಲಿ  ಈ ಘಟನೆ ಸಂಭವಿಸಿದ್ದು, ವಿಜಯ ದಶಮಿಯಂದು ನವರಾತ್ರಿ ಹಬ್ಬ ಮುಗಿದು ದುರ್ಗಾ ಮೂರ್ತಿಗಳನ್ನು ವಿಸರ್ಜಿಸಲು ಹೆಚ್ಚಿನ ಜನರು ಮಾಲ್ ನದಿಯ ದಡದಲ್ಲಿ ಸೇರಿದ್ದರು. ಈ ವೇಳೆ ದಿಢೀರ್ ಪ್ರವಾಹ ಉಂಟಾಗಿ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.

ಏಕಾಏಕಿ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಜನರು ಕೊಚ್ಚಿ ಹೋಗಿದ್ದಾರೆ. ಇಲ್ಲಿಯವರೆಗೆ, ಎಂಟು ಶವಗಳನ್ನು ಹೊರತೆಗೆಯಲಾಗಿದೆ, ಸುಮಾರು 50 ಮಂದಿಯನ್ನು ಕಾಪಾಡಲಾಗಿದೆ ಎಂದು ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡಾರಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಅಣೆಕಟ್ಟಿನ ಗೇಟ್‌ಗಳನ್ನು ತೆರೆದು ಹಿಂದೂಗಳನ್ನ ಕೊಲ್ಲಲಾಗಿದೆ ಎಂಬುದು ಸುಳ್ಳು

ಘಟನೆ ಕುರಿತು ದಿ ಹಿಂದೂ ವರದಿ ಮಾಡಿದ್ದು, ಹಿಂದೂ ವರದಿಯ ಪ್ರಕಾರ ಅಕ್ಟೋಬರ್ 5 ಬುಧವಾರ ಸಂಜೆ ಮಾಲ್ ನದಿಯ ದಡದಲ್ಲಿ ವಿಗ್ರಹಗಳ ವಿಸರ್ಜನೆಗೆ ನೂರಾರು ಜನ ಜಮಾಯಿಸಿದ್ದರು. ಸ್ಥಳೀಯವಾಗಿ ಮಳೆಯಾಗುವ ಯಾವ ಮುನ್ಸೂಚನೆಯೂ ಇರಲಿಲ್ಲ ಆದರೆ ಇದ್ದಕ್ಕಿದ್ದಂತೆ ನದಿಯಲ್ಲಿ ನೀರು ಏರ ತೊಡಗಿತ್ತು.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸ್ವಲ್ಪ ಮಳೆಯಾಗಿದ್ದರೂ, ಹತ್ತಿರದ ಎತ್ತರದ ಪ್ರದೇಶಗಳು ಮತ್ತು ಭೂತಾನ್ ಬೆಟ್ಟಗಳಲ್ಲಿ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮಾಲ್ ನದಿಯು ಈ ಬೆಟ್ಟಗಳಲ್ಲಿ ಹುಟ್ಟುತ್ತದೆ ಮತ್ತು ಅಲ್ಲಿನ ಭಾರೀ ಮಳೆಯಿಂದಾಗಿ ಎತ್ತರದ ಪ್ರದೇಶಗಳಲ್ಲಿ ಸಂಗ್ರಹವಾದ ನೀರು ಹಠಾತ್ ಪ್ರವಾಹಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ನದಿಯ ಮಧ್ಯದಲ್ಲಿ ಸಿಲುಕಿದ್ದ ಸುಮಾರು 30-40 ಜನರನ್ನು ಜಿಲ್ಲಾಡಳಿತ ರಕ್ಷಿಸಿದೆ. ದಿಢೀರ್ ಪ್ರವಾಹ ಸಂಭವಿಸಿದ ಸ್ಥಳದಲ್ಲಿ ವಿಸರ್ಜನೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಹಿಂಪಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ವಿರೋಧ ಪಕ್ಷವಾದ BJP ಆಡಳಿತ ಸರ್ಕಾರದ ಪಿತೂರಿ ಇದೆ ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಕಾರ್ಯಾಚರಣೆಯನ್ನು ಸರ್ಕಾರವೇ ಮುಂದೆ ನಿಂತು ಮಾಡಿದ್ದು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳದ ಸರ್ಕಾರ ಹಿಂದೂಗಳನ್ನು ಕೊಲ್ಲಲು ಅಣೆಕಟ್ಟಿನ ಗೇಟ್‌ಗಳನ್ನು ತೆರೆದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಅಣೆಕಟ್ಟು ಇರುವ ಬಗ್ಗೆಯಾಗಲಿ, ಅದರ ಗೇಟ್‌ಗಳನ್ನು ಒಮ್ಮೆಲೆ ಏರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ವರದಿಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗಾಂಧಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights