ಯಡಿಯೂರಪ್ಪ ನನ್ನನ್ನು ಶತ್ರುವಂತೆ ನೋಡುತ್ತಾರೆ; ನನ್ನನ್ನು ಬಂಧಿಸಲು ಐಪಿಎಸ್‌ ಅಧಿಕಾರಿಗಳನ್ನು ಕಳುಹಿಸಿದ್ದರು: ಯತ್ನಾಳ್

“ನನ್ನನ್ನು ಬಂಧಿಸಲು ಲಿಂಗಾಯತ ಐಪಿಎಸ್‌ ಅಧಿಕಾರಿಗಳನ್ನು ಕಳುಹಿಸಿದ್ದರು” ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2ಎ ಮೀಸಲಾತಿಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮುದಾಯದ ಧರಣಿಯಲ್ಲಿ ಮಾತನಾಡಿದ ವಿಜಯಪುರದ ಬಿಜೆಪಿ ಶಾಸಕ ಯತ್ನಾಳ್, “ಯಡಿಯೂರಪ್ಪ ನನ್ನನ್ನು ಅವರ ಶತ್ರು ಎಂದುಕೊಂಡಿದ್ದಾರೆ. ಅವರಿಗೆ ಪೈಪೋಟಿ ನೀಡುತ್ತಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ, ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಪೊಲೀಸರ ವಿರುದ್ಧವೂ ಅಲ್ಲ. ಮೀಸಲಾತಿಗಾಗಿ ಮಾತ್ರ” ಎಂದು ಹೇಳಿದರು.

“ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನನ್ನನ್ನು ಬಂಧಿಸಲು ಲಿಂಗಾಯತ ಐಪಿಎಸ್‌ ಅಧಿಕಾರಿಗಳನ್ನು ಕಳುಹಿಸಿದ್ದರು. ಎಷ್ಟು ದಿನ ವಿಜಯೇಂದ್ರ ಅವರ ಮಾತು ಕೇಳುತ್ತೀರಿ ಎಂದು ಹೇಳಿಕಳಿಸಿದೆ” ಎಂದು ಹೇಳಿದರು.

“ಬೇರೆ ಕಾರ್ಯ ನಿಮಿತ್ತ ನಾನು ದೆಹಲಿಗೆ ಹೋದರೆ, ಹೈಕಮಾಂಡ್‌ನವರೇ ಕರೆಸಿಕೊಂಡರು ಎಂದು ಸುಮ್ಮನೆ ಸುದ್ದಿ ಮಾಡಿಸಿದರು. ಇದೆಲ್ಲ ಮಾಡುವುದು ಬಿಟ್ಟು ಮೀಸಲಾತಿ ನೀಡುತ್ತೇವೆ ಎಂದು ಸ್ವಚ್ಛ ಮನಸಿನಿಂದ ಹೇಳಿ” ಎಂದು ಯಡಿಯೂರಪ್ಪನವರನ್ನು ಆಗ್ರಹಿಸಿದರು.

ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, “ಮೀಸಲಾತಿಗೆ ಒತ್ತಾಯಿಸಿ ರಾಜ್ಯದಾದ್ಯಂತ ಪತ್ರ ಚಳವಳಿ ನಡೆಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸಮುದಾಯದ ಜನರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ. ಮಾ.4ರವರೆಗೆ ಈ ಪ್ರತಿಭಟನೆ ಮುಂದುವರಿಯಲಿದೆ” ಎಂದರು.

ಕ್ಯಾಟಗರಿ 2ಎ ಮೀಸಲಾತಿಗೆ ಒತ್ತಾಯಿಸಿ ಬೃಹತ್‌ ಪಾದಯಾತ್ರೆ ನಡೆಸಿರುವ ಲಿಂಗಾಯತ ಪಂಚಮಸಾಲಿ ಸಮುದಾಯವು ಬೆಂಗಳೂರಿನಲ್ಲಿ ಭಾನುವಾರ ಮಹಾರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿತ್ತು. ಈ ರ‍್ಯಾಲಿಯಲ್ಲಿ ಸಮುದಾಯದ ಜನ ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ಹಲವು ದಿನಗಳಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸಬೇಕು ಎಂದು ಕೂಗು ಕೇಳಿಬರುತ್ತಿದೆ. ಇದರ ಪ್ರಮುಖ ನಾಯಕರಾಗಿದ್ದ ಬಸನಗೌಡ ಯತ್ನಾಳ್ ಪಟ್ಟಬಿಡದೇ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಸ್ವಷ್ಟನೆ ಕೊಡಲೇಬೇಕು ಎಂದು ಒತ್ತಾಯಿಸಿದ್ದರು. ಆದರೆ ಯಡಿಯೂರಪ್ಪನವರು ಹೈಕಮಾಂಡ್ ಕಡೆ ಕೈತೋರಿಸಿ ಜಾರಿಕೊಂಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights