ಬೆಳಗಾವಿಯಲ್ಲಿ ರಮೇಶ್ ಬೆಂಬಲಿಗರಿಂದ ಮತ್ತೆ ಪ್ರತಿಭಟನೆ : ಸಿಡಿ ತನಿಖೆಗೆ ಆಗ್ರಹ!
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮತ್ತೆ ಅಲ್ಲಲ್ಲಿ ರಮೇಶ್ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಶಾಂತವಾಗಿದ್ದ ಬೆಳಗಾವಿಯಲ್ಲಿ ಮತ್ತೆ ಪ್ರತಿಭಟನೆಯ ಕಾವು ಹೆಚ್ಚಾಗಿದೆ.
ಗೋಕಾಕ್ ನಲ್ಲಿ ರಸ್ತೆ ತಡೆದು ನೂರಾರು ಸಂಖ್ಯೆಯಲ್ಲಿ ರಮೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಳಗಾವಿ ಚೆನ್ನಮ್ಮ ಸರ್ಕಲ್, ಬೆಳಗಾವಿ ಗ್ರಾಮೀಣ ಭಾಗದಲ್ಲಿ ರಮೆಶ್ ಬೆಂಬಲಿಗರು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲಕ್ಷ್ಮೀ ಹೆಬ್ಬಳ್ಕರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು ಟೈರ್ ಗೆ ಬೆಂಕಿ ಹಚ್ಚಿ ಬೆಂಬಲಿಗರು ಸಿಡಿ ತನಿಖೆಗೆ ಆಗ್ರಹಿಸಿದ್ದಾರೆ. ಮುಗಳಖೋಡದಲ್ಲಿ ನೂರಾರು ಸಂಖ್ಯೆಯಲ್ಲಿ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ವಿಶೇಷವೇನು ಎಂದರೆ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗಿಯಾಗಿದ್ದಾರೆ.
ರಾಜಕೀಯ ದುರುದ್ದೇಶ ಇದರಲ್ಲಿದೆ. ಸರ್ಕಾರ ತನಿಖೆ ತಂಡ ರಚನೆ ಮಾಡಿ ಸತ್ಯಸತ್ಯತೆ ಬಯಲಿಗೆಳಿಯಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಮೇಲೆ ಸಿಡಿ ತನಿಖೆಗಾಗಿ ಒತ್ತಡ ತರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.