ಲಾಕ್ ಡೌನ್ ನಡುವೆಯೂ ಜನ ಮನೆ ಬಿಟ್ಟು ಹೊರಬರಲು ಕಾರಣವೇನಿರಬಹುದು..?
ಕೋವಿಡ್ -19 ವಿಶ್ವವನ್ನೇ ನಡುಗಿಸಿಬಿಟ್ಟಿದೆ. ಅತ್ಯತ್ತಮ ವೈದ್ಯಕೀಯ ಸೌಲಭ್ಯವಿರುವ ದೇಶಗಳು ಕೊರೊನಾ ಮುಂದೆ ಮಂಡಿಯೂರಿವೆ. ಇದಕ್ಕೆ ಕಾರಣವೇನು? ಅನ್ನೋದನ್ನ ಹುಡುಕುತ್ತಾ ಹೋದರೆ ರೋಚಕ ಸಂಗತಿಗಳು ಎದುರಾಗುತ್ತವೆ.

ಹೌದು… ಭಾರತದ ವಿಚಾರವಾಗಿ ಮಾತನಾಡೋಣ. ಲಾಕ್ ಡೌನ್ ಜಾರಿಯಾಗಿ ಸರಿಸುಮಾರು 20 ದಿನಗಳು ಕಳೆದಿವೆ. ಆದರೂ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಹೊರತಾಗಿ ಕಡಿಮೆಯಾಗುತ್ತಿಲ್ಲ. ದೇಶದಲ್ಲಿ ಕೊರೊನಾ ಬೇರೆ ದೇಶಗಳಿಗೆ ಹೋಲಿಸಿದರೆ ನಿಯಂತ್ರಣದಲ್ಲಿದ್ದರೂ ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ಇದಕ್ಕೆ ಕಾರಣ ಜನ ಮನೆ ಬಿಟ್ಟು ಹೊರಬಂದು ಅಂತರ ಕಾಯ್ದುಕೊಳ್ಳದೇ ಇರುವುದು. ದೇಶದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಹೋರಾಡಲು ದೇಶದ ಜನರಿಗೆ ಮನವಿ ಮಾಡಿಕೊಂಡು ಕರೆ ನೀಡಿದ್ದರು. ಪ್ರಧಾನಿ ಮೋದಿ ದೇಶದ ಜನರ ಹಿತ ದೃಷ್ಟಿಯಿಂದ ಲಾಕ್ ಡೌನ್ ಘೋಷಿಸಿ ಜನರಿಗೆ ಮನೆಯಿಂದ ಹೊರಬಾರದಂತೆ ಸೂಚಿಸಿದರು.
ದೇಶದ ಬಹುತೇಕ ಜನ ಇದನ್ನ ಚಾಚು ತಪ್ಪದೇ ಪಾಲಿಸುತ್ತಿದ್ದಾರೆ ಕೂಡ. ಆದರೆ ಕೆಲವರು ಮನೆ ಬಿಟ್ಟು ಹೊರಬರುವುದು ಮಾತ್ರ ಬಿಟ್ಟಿಲ್ಲ ಕಾರಣವೇನು ಎನ್ನುವುದಕ್ಕೆ ಉತ್ತರ ಸ್ಥಳವಕಾಶದ ಕೊರತೆ ಎನ್ನಲಾಗುತ್ತಿದೆ.

ಹೌದು.. ಭಾರತ ಅದೆಷ್ಟೆ ಅಭಿವೃದ್ಧಿ ಹೊಂದಿದರೂ ಬಡತನದ ರೇಖೆಯಲ್ಲಿ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದಾರೆ. ಅವರಿಗೆ ತಿನ್ನಲು ಅನ್ನ, ಉಡಲು ಬಟ್ಟೆ, ವಾಸವಿರಲು ಸ್ಥಳದ ಕೊರತೆ ಇದೆ. ಅದೆಷ್ಟೋ ಜನ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ ಭಿಕ್ಷೆ ಬೇಡಿಕೊಂಡು ಅಲ್ಲೇ ಇದ್ದುಕೊಂಡು ಜೀವನ ಮಾಡುತ್ತಿದ್ದಾರೆ. ಅದಷ್ಟೇ ಯಾಕೆ ಬೀದಿಯಲ್ಲೇ ಜೀವನ ಮಾಡುವವರು ನೂರಾರು ಜನ ನಮ್ಮ ದೇಶದಲ್ಲಿ ಇದ್ದಾರೆ. ಇವರೆಲ್ಲಾ ಲಾಕ್ ಡೌನ್ ಮಾಡಿದರೆ ಎಲ್ಲಿ ಹೋಗುತ್ತಾರೆ..? ಏನ್ ತಿಂತಾರೆ..?
ಇನ್ನೂ ಸ್ಲಮ್ ಗಳನ್ನ ಪರಿಗಣನೆಗೆ ತೆಗೆದುಕೊಂಡರೆ ಅವರುಗಳ ಸ್ಥಿತಿ ಹೇಳೋ ಹಾಗೇ ಇಲ್ಲ. ಸ್ಲಮ್ ನಲ್ಲಿ ವಾಸಿಸುವವರಿಗೆ ಮನೆಯಲ್ಲಿ ಕುಳಿತುಕೊಳ್ಳಲೂ ಜಾಗವಿರುವುದಿಲ್ಲ. ಒಂದು ಮನೆಯಿಂದ ಮತ್ತೊಂದು ಮನೆಗೆ ಹತ್ತಿಕೊಂಡಿರುವ ಪುಟ್ಟ ಪುಟ್ಟ ಮನೆಗಳಲ್ಲಿ, ಕಾಲ್ದಾರಿಗಳನ್ನೇ ರಸ್ತೆಗಳನ್ನಾಗಿ, ಮಲಗುವ ಕೋಣೆಗಳನ್ನಾಗಿ ಮಾಡಿಕೊಂಡು ಬದುಕುವ ಜನ ಅಂತರ ಹೇಗೆ ಕಾಯ್ದುಕೊಳ್ಳಲು ಸಾಧ್ಯ…? ಇಂತಹ ಇಕ್ಕಟ್ಟಿನ ಸ್ಥಳದಲ್ಲಿ ಜೀವನ ಸಾಗಿಸೋ ಜನರಿಗೆ ಅಂತರ ಕಾಯ್ದುಕೊಳ್ಳಿ ಅಂದರೆ ಬೀದಿಗೇ ಇಳಿಯಬೇಕು ಅಷ್ಟೇ. ಇದನ್ನು ಕೂಡ ಸರ್ಕಾರ ಯೋಚಿಸಬೇಕು ಅಲ್ಲವೇ.

ಇನ್ನೂ ಊರು ಬಿಟ್ಟು ಊರಿಗೆ ಹೋಗಿ ಕೂಲಿ ಮಾಡುವಂತವರಿಗೆ ಜಾಗ ಕೊಡುವವರು ಯಾರು..? ಕಟ್ಟಡ ಕಟ್ಟುವ ಸ್ಥಳದಲ್ಲಿ ಉಳಿದುಕೊಂಡು ಕೂಲಿ ಮಾಡುವಂತ ಅದೆಷ್ಟೋ ಜನ ತಮ್ಮ ಊರುಗಳಿಗೇ ಹೋಗಿಲ್ಲ. ಇವರೆಲ್ಲಾ ತಮ್ಮದಲ್ಲದೇ ಸ್ಥಳದಲ್ಲಿ ಉಳಿದುಕೊಳ್ಳುವುದೇ ಹೆಚ್ಚು ಇಂತವರು ಅಂತರ ಕಾಯ್ದುಕೊಳ್ಳುವುದು ಹೇಗೆ..?
ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸ ಮಾಡುವ ಜನರಿಗೆ, ಕ್ರೀಡಾಂಗಣದಂತ ಪಾರ್ಕಿಂಗ್ ಸ್ಥಳ ಹೊಂದಿರುವ ಜನರಿಗೆ ಬಡವರು ವಾಸಿಸುವ ಸ್ಥಳದ ಬಗ್ಗೆ ಅರಿವಾಗುವುದು ಕಷ್ಟವೇ. ಅಂತರ ಕಾಯ್ದುಕೊಳ್ಳಿ ಎಂದು ಹೇಳುವುದು ಸುಲಭವೇ. ಆದರೆ ಕುಳಿತುಕೊಳ್ಳಲು ಸ್ಥಳವಿಲ್ಲದೇ ಗುಡಿಸಲು, ಶೆಡ್ಡುಗಳಲ್ಲಿ ಬದುಕುವ ಜನರು ಅಂತರ ಹೇಗೆ ತಾನೇ ಕಾಯ್ದುಕೊಂಡಾರು..? ಈ ಬಗ್ಗೆ ಸರ್ಕಾರ ಯೋಚನೆ ಮಾಡಬೇಕಿದೆ.
ರಾಜಕಾರಣಿಗಳು ಸಮಯ ಸಾಧಕರಾಗಿ ತಮ್ಮ ಪ್ರಚಾರಕ್ಕೋಸ್ಕರ ಉಚಿತ ಆಹಾರ ನೀಡುವುದರೊಂದಿಗೆ ಗಂಟೆಗಟ್ಟಲೆ ಭಾಷಣ ಬಿಗಿದು ಜನರನ್ನು ಒಂದೆಡೆ ಸೇರುವಂತೆ ಮಾಡುತ್ತಿದ್ದಾರೆ. ಕೆಲವು ಶಾಸಕರಂತೂ ಹುಟ್ಟುಹಬ್ಬ, ಕಾರ್ಯಕ್ರಮಗಳನ್ನು ಮಾಡಿಕೊಂಡು ಜನರನ್ನು ಒಂದೆಡೆ ಸೇರಿಸುತ್ತಿದ್ದಾರೆ. ಜನಜಾಗೃತಿ ಮೂಡಿಸಿ ಮಾದರಿಯಾಗಬೇಕಾದ ಜನಪ್ರತಿನಿಧಿಗಳು ಈ ರೀತಿ ವರ್ತಿಸಿದರೆ ಜನ ಅಂತರ ಕಾಯ್ದುಕೊಂಡು ಮನೆಯಲ್ಲಿರುತ್ತಾರಾ..? ಜನ ಸಾಮಾನ್ಯರು ಹೊಟ್ಟೆಪಾಡಿಗಾಗಿ ಒಂದು ಅಂಗಡಿ ತೆರೆದರೆ ತಪ್ಪು. ಆದರೆ ಜನಪ್ರತಿನಿಧಿಗಳು ಊಟ ಹಂಚುವ ವೇಳೆ ಜನರನ್ನು ಒಂದೆಡೆ ಸೇರಿಸುವುದು ತಪ್ಪಲ್ಲವೇ..? ಊಟ ಹಂಚುವುದು ಒಳ್ಳೆಯ ಕೆಲಸ. ಆದರೆ ಇದೇ ಸಂದರ್ಭವನ್ನು ಪ್ರಚಾರಕ್ಕಾಗಿ ಬಳಸಿಕೊಂಡು ಗಂಟೆಗಟ್ಟಲೆ ಭಾಷಣ ಮಾಡಿ, ಕಾರ್ಯಕ್ರಮ ಮಾಡುವುದು ಸರಿನಾ..? ಈ ವೇಳೆ ಜನ ಸೇರದೇ ಇನ್ನೇನು ಮಾಡುತ್ತಾರೆ..? ಭಾಷಣ ಕೇಳಲು ನಿಂತುಕೊಳ್ಳುವ ಜನ ಅದೆಷ್ಟರ ಮಟ್ಟಿಗೆ ಅಂತರ ಕಾಯ್ದುಕೊಂಡಾರು..? ಇದರ ಬಗ್ಗೆ ಯೋಚನೆ ಮಾಡುವಂತಹ ಅಗತ್ಯತೆ ಇದೆ.

ಅಷ್ಟಕ್ಕೂ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಿದರೆ ಜನ ಮನೆಬಿಟ್ಟು ಯಾವ ಕಾರಣಕ್ಕಾಗಿ ಬರುತ್ತಾರೆ? ಜನರಿಗೆ ಅವಶ್ಯವಿರುವ ವಸ್ತುಗಳನ್ನ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸವಾದರೆ ಜನ ಮನೆಬಿಟ್ಟು ಹೊರಬರುವುದನ್ನ ತಪ್ಪಿಸಬಹುದು. ಅದನ್ನ ಬಿಟ್ಟು ಉಚಿತ ಹಾಲು ವಿತರಿಸುವುದು, ಉಚಿತ ಆಹಾರ ಕಿಟ್ ಪೂರೈಸುವುದಾಗಿ ಹೇಳಿದರೆ ಜನ ಗುಂಪಾಗಿ ಒಂದೆಡೆ ಸೇರದೇ ಇನ್ನೇನು ಮಾಡುತ್ತಾರೆ? ಇದರ ಬದಲಿಗೆ ಹಾಲು -ಆಹಾರದ ಕಿಟ್, ತರಕಾರಿ, ಹಣ್ಣು, ದಿನಸಿಗಳನ್ನು ದಿನ ಬಳಕೆಯ ಅಗತ್ಯ ವಸ್ತುಗಳನ್ನ ಸರ್ಕಾರ ಮನೆ ಮನೆಗೆ ಪೂರೈಸುವಂತಹ ವ್ಯವಸ್ಥೆ ಮಾಡಿದರೆ ಜನ ಗುಂಪಾಗಿ ಒಂದೆಡೆ ಸೇರುವುದು ತಪ್ಪಿಸಬಹುದು.

