ಆಂಧ್ರ v/s ಬಿಜೆಪಿ: ಮಾರಲು ನೀವು ಯಾರು? ಕೊಳ್ಳಲು ಅವರು ಯಾರು?; ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ವಿರುದ್ಧ ಗುಡುಗಿತು ತೆಲುಗು ರಾಜ್ಯ!

‘ಕೊನಡನಿಕಿ ವಾಡೆವ್ವಾಡು? ಅಮ್ಮದನಿಕಿ ವಡೇವಾಡು? ವಿಶಾಕ್ಕ ಉಕ್ಕು ಅಂಧ್ರುಲಾ ಹಕ್ಕು’ (ಖರೀದಿಸಲು ಅವರು ಯಾರು? ಮಾರಾಟ ಮಾಡಲು ಅವರು ಯಾರು? ವೈಜಾಗ್ ಸ್ಟೀಲ್ ಪ್ಲಾಂಟ್ ಆಂಧ್ರ ಜನರ ಹಕ್ಕು) ಇದು ತೆಲುಗು ಜನರ ಘೋಷಣೆಯಾಗಿದೆ. ಇದು ಆಂಧ್ರಪ್ರದೇಶದ ವಿಜಯವಾಡ ನಗರದ ಲೆನಿನ್ ವೃತ್ತದಲ್ಲಿ ಮಾರ್ಚ್ 5ರಂದು ಮೊಳಗಿ ಘೋಷಣೆ.

ವಿಶಾಖಪಟ್ಟಣಂನ ಸರ್ಕಾರಿ ಸ್ವಾಮ್ಯದ ಉಕ್ಕು ತಯಾರಿಕಾ ಘಟಕವಾದ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್‌ಐಎನ್ಎಲ್) ನ ಖಾಸಗೀಕರಣದ ವಿರುದ್ಧ ರಾಜ್ಯವ್ಯಾಪಿ ಬಂದ್‌ ಪ್ರತಿಭಟನೆ ನಡೆಸಲಾಯಿತು. ಹೋರಾಟದಲ್ಲಿ ಕಾರ್ಮಿಕ ಸಂಘಗಳು, ತೆಲುಗು ದೇಶಂ ಪಕ್ಷದ ಸದಸ್ಯರು, ಆಡಳಿತ ವೈಎಸ್ಆರ್‌ಸಿಪಿ ಪಕ್ಷ ಮತ್ತು ಇತರ ಜನರ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದವು.

ವೈಜಾಗ್ ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣಗೊಳಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯೋಜಿಸಿದೆ. ಇದರ ವಿರುದ್ಧ  ಲಕ್ಷಾಂತರ ಜನರು ತಮ್ಮ ಭಿನ್ನಾಭಿಪ್ರಾಯ ಮತ್ತು ದುಃಖವನ್ನು ಪ್ರದರ್ಶಿಸಲು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ, ರಸ್ತೆಗಳಲ್ಲಿ ಬೀದಿಗಳಿದು ಪ್ರತಿಭಟಿಸಿದ್ದಾರೆ.

ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ವಿಶಾಖಪಟ್ಟಣಂ ನಗರವು ಎಲ್ಲಾ ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಬ್ಯಾಂಕುಗಳು, ಚಿತ್ರಮಂದಿರಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಸೌಲಭ್ಯಗಳನ್ನು ಮುಚ್ಚುವುದರೊಂದಿಗೆ ಸಂಪೂರ್ಣ ಸ್ಥಗಿತಗೊಂಡಿತ್ತು.

shutdown

ರಾಜ್ಯದ ಇತರ ಭಾಗಗಳಲ್ಲಿ, ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದರೆ, ಶಾಲೆಗಳು, ಕಾಲೇಜುಗಳು, ಅಂಗಡಿಗಳು ಇತ್ಯಾದಿಗಳು ಮುಚ್ಚಲ್ಪಟ್ಟಿದ್ದವು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಉಕ್ಕಿನ ಸ್ಥಾವರವನ್ನು ಖಾಸಗೀಕರಣಗೊಳಿಸುವ ಯೋಜನೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಕರೆ ನೀಡಿದ್ದ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ರಾಜ್ಯವು ನೂರಾರು ರ್ಯಾಲಿಗಳು, ರಸ್ತೆ ತಡೆಗಳನ್ನು ಮಾಡುವ ಮೂಲಕ ಸ್ವಯಂಪ್ರೇರಿತ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

ಆಂಧ್ರಪ್ರದೇಶದ ರಸ್ತೆ ಸಾರಿಗೆ ನಿಗಮ, ಆಂಧ್ರಪ್ರದೇಶದ ಲಾರಿ ಮಾಲೀಕರ ಸಂಘ, ಆಟೊಗಳು ಮತ್ತು ಇತರ ಖಾಸಗಿ ಸಾರಿಗೆ ವಾಹನಗಳ ಸಂಘಗಳು ಸಹ ಬಂದ್‌ಗೆ ಬೆಂಬಲ ನೀಡಿದ್ದು, ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದವು.

ನಡೆಯುತ್ತಿರುವ ಹೋರಾಟವು ಸಾರ್ವಜನಿಕ ವಲಯದ ಖಾಸಗೀಕರಣದ ವಿರುದ್ಧದ ದೊಡ್ಡ ಚಳುವಳಿಯಾಗಿದೆ ಎಂದು ವಿಶಾಖಾ ಉಕ್ಕು ಪರಿಕ್ಷಾಣ ಪೊರಟಾ ಸಮಿತಿಯ (ವಿ.ಯು.ಪಿ.ಪಿ.ಸಿ) ಕನ್ವೀನರ್ ಜ್ಯೇಸ್ತಾ ಅಯೋಧ್ಯ ರಾಮು ಹೇಳಿದರು.

“ವೈಜಾಗ್ ಸ್ಟೀಲ್ ಪ್ಲಾಂಟ್‌ಅನ್ನು ಆಂಧ್ರ ಜನರು ತಮ್ಮ ಸಾಮೂಹಿಕ ಆಸ್ತಿಯೆಂದು ಪರಿಗಣಿಸುತ್ತಾರೆ. ಅವರು ಸರ್ಕಾರಿ ಸ್ವಾಮ್ಯದ ಸ್ಥಾವರಗಳನ್ನು ಖಾಸಗಿಯವರು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ನಡೆಯುತ್ತಿರುವ ಪ್ರತಿಭಟನೆಗಳು ಮೋದಿ ಸರ್ಕಾರವು ನಡೆಸುತ್ತಿರುವ ಸಾರ್ವಜನಿಕ ವಲಯದ ಆಕ್ರಮಣಕಾರಿ ಖಾಸಗೀಕರಣವನ್ನು ಖಂಡಿಸಿವೆ” ಎಂದು ಅವರು ಹೇಳಿದರು.

“ಬಂದ್‌ನ ಭಾರಿ ಯಶಸ್ಸು ಬಿಜೆಪಿಗೆ ಬಲವಾದ ಸಂದೇಶವನ್ನು ರವಾನಿಸುತ್ತದೆ. ಸ್ಥಾವರವನ್ನು ಮಾರಾಟ ಮಾಡುವ ಕುರಿತಾದ ಕ್ಯಾಬಿನೆಟ್ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಕೇಸರಿ ಪಕ್ಷದ ನಾಯಕರು ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ರಾಜ್ಯ ಬಿಜೆಪಿ ನಾಯಕರು ಮತ್ತು ಅವರ ಮಿತ್ರ ಜನಸೇನೆ ಪಕ್ಷವು ಪ್ರತಿಭಟನಾನಿರತ ಕಾರ್ಮಿಕರ ಪರವಾಗಿ ಮಾತನಾಡುವ ಮೂಲಕ ತಮ್ಮ ಮುಖವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದರು.

ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಇಂಡಿಯನ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್, ಬುಡಕಟ್ಟು ಮತ್ತು ದಲಿತ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು, ಮಹಿಳಾ ಹಕ್ಕು ಮತ್ತು ನಾಗರಿಕ ಸಂಸ್ಥೆಗಳು, ಆಂಧ್ರಪ್ರದೇಶದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಇತರ ಕಾರ್ಮಿಕರು ಮತ್ತು ನೌಕರರ ಸಂಘಗಳು ಸೇರಿದಂತೆ ಕಾರ್ಮಿಕ ಸಂಘಗಳು ಬಂದ್‌ನ ಅಂಗವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆಡಳಿತಾರೂಢ ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡರು ಮತ್ತು ಮಂತ್ರಿಗಳು ಬಂದ್‌ಗೆ ಬೆಂಬಲ ನೀಡಿದ್ದು, ರಾಜ್ಯಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ತೆಲುಗು ದೇಶಂ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಸಿಪಿಐ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಬಿಟ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

“ಶ್ರೀಕಾಕುಲಂನಿಂದ ಚಿತ್ತೂರುವರೆಗಿನ ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿದ್ದು, ಬಿಜೆಪಿ ಸ್ಪಷ್ಟ ಸಂದೇಶ ರವಾನೆಯಾಗಿದೆ” ಎಂದು ರಾಜ್ಯ ಸಿಪಿಐ (ಎಂ) ಸಚಿವಾಲಯದ ಸದಸ್ಯ ಸಿ.ಎಚ್. ​​ಬಾಬು ರಾವ್ ಹೇಳಿದರು.

ವಿಜಯವಾಡದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾವ್, “ಇಡೀ ಆಂಧ್ರಪ್ರದೇಶ ಒಂದು ಕಡೆ ಇದೆ ಮತ್ತು ಈ ಹೋರಾಟದಲ್ಲಿ ಬಿಜೆಪಿ ವಿರುದ್ಧವಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಹಣ ನೀಡುವ ವಿಚಾರದಲ್ಲಿ ಆಂಧ್ರಕ್ಕೆ ಹೇಗೆ ದ್ರೋಹ ಮಾಡಿದೆ ಎಂದು ಜನರು ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅನಂತಪುರ ಮತ್ತು ಕಡಪಾ ಸೇರಿದಂತೆ ರಾಜ್ಯದ ರಾಯಲಸೀಮಾ ಜಿಲ್ಲೆಗಳಲ್ಲಿ, ಕಾರ್ಮಿಕ ಸಂಘಗಳು ಮತ್ತು ವಿರೋಧ ಪಕ್ಷಗಳು ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಿದವು ಮತ್ತು ಕಡಪಾ ಜಿಲ್ಲೆಯಲ್ಲಿ ಹೊಸ ಉಕ್ಕಿನ ಸ್ಥಾವರವನ್ನು ಆರಂಭಿಸಬೇಕು ಒತ್ತಾಯಿಸುತ್ತಿವೆ.

ನೆರೆಯ ರಾಜ್ಯದಲ್ಲಿ ನಡೆದ ಪ್ರತಿಭಟನೆಗಳಿಗೆ ಒಗ್ಗಟ್ಟಾಗಿ ಎಡ ಪಕ್ಷಗಳು ಹೈದರಾಬಾದ್‌ನ ಧರ್ನಾ ಚೌಕ್ ಬಳಿ ಸಾರ್ವಜನಿಕ ಸಭೆ ನಡೆಸಿವೆ.

“ಸ್ಟೀಲ್ ಪ್ಲಾಂಟ್ ಸ್ವಾವಲಂಬಿಯಾಗಿದೆ. ಅದರ ಬಾಕಿಗಳನ್ನು ನಿಯಮಿತವಾಗಿ ಬ್ಯಾಂಕುಗಳಿಗೆ ಪಾವತಿಸುತ್ತದೆ. ಕೇಂದ್ರ ಸರ್ಕಾರವು ಯಾವತ್ತೂ ಸ್ಥಾವರಕ್ಕೆ ಸಹಾಯ ಹಸ್ತ ಚಾಚಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಕಬ್ಬಿಣದ ಅದಿರು ಗಣಿ ನೀಡುವುದನ್ನು ನಿಲ್ಲಿಸಿತು”ಎಂದು ರಾಮು ವಿವರಿಸಿದರು.

ಕಾರ್ಮಿಕರ ಸಂಘಗಳ ಪ್ರಕಾರ, ಉಕ್ಕಿನ ಸ್ಥಾವರದಲ್ಲಿ ಸುಮಾರು 33,000 ಉದ್ಯೋಗಿಗಳು ಮತ್ತು ಕಾರ್ಮಿಕರಿದ್ದಾರೆ ಮತ್ತು ಇನ್ನೂ 70,000 ಜನರು ತಮ್ಮ ಜೀವನೋಪಾಯಕ್ಕಾಗಿ ಸ್ಥಾವರವನ್ನು ಅವಲಂಬಿಸಿದ್ದಾರೆ.

“ಬಿಜೆಪಿ ಸರ್ಕಾರವು ಸಾರ್ವಜನಿಕ ವಲಯವನ್ನು ಉಳಿಸುತ್ತಾರೆ ಎಂಬ ನಂಬಿಕೆಯಿಂದ ಜನರು ಬಿಜೆಪಿಗೆ ಮತ ಹಾಕಿದರು. ಆದರೆ, ಅವುಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ” ಎಂದು ರಾಮು ಹೇಳಿದರು.

ಸಾರ್ವಜನಿಕ ವಲಯದ ಘಟಕಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಲಿದೆ ಎಂದು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. “ದೇಶದ ಉದ್ಯಮ ಮತ್ತು ವ್ಯವಹಾರವನ್ನು ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಸರ್ಕಾರವು ವ್ಯವಹಾರದಲ್ಲಿ ಇರಬೇಕಾದ ಅಗತ್ಯವಿಲ್ಲ” ಎಂದು ‘ಖಾಸಗೀಕರಣ’ ಕುರಿತು ವೆಬ್‌ನಾರ್‌ನಲ್ಲಿ ಮೋದಿ ಹೇಳಿದ್ದರು.

ಮೂಲ: ನ್ಯೂಸ್‌ ಕ್ಲಿಕ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights