ರೈತ ಹೋರಾಟದ ಪರಿಣಾಮವನ್ನು BJP ಚುನಾವಣೆಗಳಲ್ಲಿ ಎದುರಿಸಲಿದೆ: ರೈತ ನಾಯಕ ದರ್ಶನ್‌ ಪಾಲ್‌ ಸಂದರ್ಶನ

ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮೂರು ತಿಂಗಳುಗಳನ್ನು ದಾಟಿ ಮುಂದುವರೆದಿದೆ. ಈ ಸಮಯದಲ್ಲಿ ಹಲವಾರು ಘಟನೆಗಳು ನಡೆದಿವೆ. ರೈತ ಹೋರಾಟವನ್ನು ಹತ್ತಿಕ್ಕಲು ನಾನಾ ರೀತಿಯಲ್ಲಿ ಆಡಳಿತಾರೂಢ ಪಕ್ಷ ಯತ್ನಿಸಿ ವಿಫಲವಾಗಿದೆ. ಈ ಎಲ್ಲಾ ವಿದ್ಯಮಾನಗಳು ಮತ್ತು ಮೂರು ತಿಂಗಳ ಹೋರಾಟದ ಬಗ್ಗೆ ಸಮುಕ್ತಾ ಕಿಸಾನ್ ಮೋರ್ಚಾ ನಾಯಕ ಡಾ. ದರ್ಶನ್‌ ಪಾಲ್‌ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ದಿ ಕ್ವಿಂಟ್‌ ಸಂದರ್ಶನ ನಡೆಸಿದ್ದು, ದರ್ಶನ್‌ ಪಾಲ್‌ ಅವರು ಹಂಚಿಕೊಂಡ ಹಲವಾರು ಮಾಹಿತಿಗಳು ಹೀಗಿವೆ.

ರೈತರ ಪ್ರತಿಭಟನೆಗೆ ಇದು ‘ ಸೂಕ್ತ ಸಮಯ’ವೇ?

ರೈತ ಸಂಘಗಳು ಮತ್ತು ಕೇಂದ್ರ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಅದರೆ, ಆ ಎಲ್ಲಾ ಮಾತುಗಳು ವಿಫಲವಾಗಿದೆ. ಇದಾದ ನಂತರ, ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಸ್ಥಗಿತಗೊಂಡಿದೆ. ಅದರಲ್ಲೂ ವಿಶೇಷವಾಗಿ ಜನವರಿ 26 ರ ಟ್ರಾಕ್ಟರ್ ಮೆರವಣಿಗೆಯಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ರೈತರು ದಣಿದಿದ್ದಾರೆ, ಅವರು ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ, ಮೂರು ಕೃಷಿ ಕಾನೂನುಗಳು ರದ್ದಾಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಯಾರಾದರೂ ರೈತ ಹೋರಾಟ ಶೀಘ್ರವೇ ಅಂತ್ಯಗೊಳ್ಳುತ್ತದೆ ಎಂದು ಭಾವಿಸಿದ್ದರೆ, ಅದು ಅವರ ತಪ್ಪು ಗ್ರಹಿಕೆ ಎಂದು ದರ್ಶನ್‌ ಪಾಲ್‌ ಹೇಳಿದ್ದಾರೆ.

“ನಾವು ಪ್ರತಿಭಟನೆಯನ್ನು ಪ್ರಾರಂಭಿಸಿದಾಗ, ಇದು ಸುದೀರ್ಘಕಾಲದವರೆಗೆ ಮುಂದುವರಿಯಬಹುದು ಎಂದು ನಮಗೆ ತಿಳಿದಿತ್ತು. ಇದಲ್ಲದೆ, ಈಗ ಕೊಯ್ಲು ಕಾಲವಾಗಿರುವುದರಿಂದ ರೈತರು ಸ್ವತಃ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಅದೇ ಸಮಯದಲ್ಲಿ, ಸಮಾಜದ ಇತರ ಅನೇಕ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಸೇರುತ್ತಿವೆ” – ಡಾ. ದರ್ಶನ್‌ ಪಾಲ್

“ಕೊಯ್ಲಿನ ಸಮಯದಲ್ಲಿ ಪ್ರತಿಭಟನೆಗಳು ಮತ್ತು ಚಳುವಳಿಗಳು ತಮ್ಮನ್ನು ತಾವು ಉಳಿಸಿಕೊಂಡಿವೆ ಎಂದು ನನ್ನ ಸ್ವಂತ ಅನುಭವದಿಂದ ನಾನು ಹೇಳುತ್ತೇನೆ. ಕೊಯ್ಲು ಋತುವಿನ ಕಾಲದಲ್ಲಿ ನಮ್ಮೊಂದಿಗೆ ಸಮಾಜದ ಇತರ ವರ್ಗಗಳ ಕೈಜೋಡಿಸಿವೆ. ಹೋರಾಟದಲ್ಲಿ ಭಾಗಿಯಾಗಿವೆ. ಅವರೆಲ್ಲರ ಸಹಾಯದಿಂದ ನಾವು ಇದನ್ನು ಗೆಲ್ಲುತ್ತೇವೆ ಎಂದು ನನಗೆ ವಿಶ್ವಾಸವಿದೆ” ಎಂದು ದರ್ಶನ್‌ ಪಾಲ್‌ ಹೇಳಿದ್ದಾರೆ.

ಮಹಾಪಂಚಾಯತ್‌ಗಳಲ್ಲಿ ಲಕ್ಷಾಂತರ ಜನರು ಸೇರುತ್ತಿರುವಾಗ, ದೆಹಲಿ ಗಡಿಯಲ್ಲಿ ಜನಸಂದಣಿ ಏಕೆ ತೆಳುವಾಗುತ್ತಿದೆ?

ಪಂಜಾಬ್, ಹರಿಯಾಣ, ರಾಜಸ್ಥಾನ, ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಾಪಂಚಾಯತ್‌ಗಳನ್ನು ಆಯೋಜಿಸಲಾಗುತ್ತಿದೆ. ಚಳುವಳಿ ಈಗ ಪ್ಯಾನ್-ಇಂಡಿಯಾ (ದೇಶಾದ್ಯಂತ) ನೆಲೆಯನ್ನು ಪಡೆಯುತ್ತಿದೆ. ಜನವರಿ 26 ರ ನಂತರ ಜನರು ಪ್ರತಿಭಟನೆಯಿಂದ ದೂರವಾಗಿದ್ದರೂ ಸಹ, ಅನೇಕರು ತಮ್ಮ ಬೆಂಬಲವನ್ನು ವಿಸ್ತರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ದೆಹಲಿ ಗಡಿಗೆ ಬಂದಿದ್ದಾರೆ ಎಂದು ದರ್ಶನ್‌ ಪಾಲ್‌ ಹೇಳಿದ್ದಾರೆ.

“ಜನವರಿ 26 ರಂದು, ನಮ್ಮ ಆಂದೋಲನವು ದೊಡ್ಡ ಹಿನ್ನಡೆ ಅನುಭವಿಸಿದ ರೀತಿಯಲ್ಲಿ ಘಟನೆಗಳು ತೆರೆದುಕೊಂಡವು. ನಾವು ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅನೇಕ ಜನರು ಚಳುವಳಿಯ ಮೇಲೆ ಅಸಮಾಧಾನಗೊಂಡರು. ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಹಲವಾರು ಜನರು ನಮ್ಮ ಚಳುವಳಿಯಿಂದ ದೂರ ಉಳಿದಿದ್ದನ್ನು ನಾವು ಗಮನಿಸಿದ್ದೇವೆ. ಆದರೆ ಮತ್ತೆ, ಜನವರಿ 28 ರಿಂದ, ಅದೇ ರಾಜ್ಯಗಳ ಜನರು ಪ್ರತಿಭಟನಾ ಸ್ಥಳಗಳಿಗೆ ಮರಳಲು ಪ್ರಾರಂಭಿಸಿದರು. ಇದೀಗ ದೆಹಲಿ ಗಡಿಯಲ್ಲಿ ರೈತ ಹೋರಾಟ ಮತ್ತಷ್ಟು ಗಟ್ಟಿಗೊಂಡಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 04 ಲಕ್ಷ ಅಲ್ಲ 40 ಲಕ್ಷ ಟ್ರಾಕ್ಟರ್‌ಗಳು ಸಂಸತ್‌ಗೆ ಮುತ್ತಿಗೆ ಹಾಕಲಿವೆ: ರೈತ ನಾಯಕ ಟಿಕಾಯತ್‌

“ಆಂದೋಲನವನ್ನು ಉಳಿಸಿಕೊಳ್ಳಲು ಪ್ರಸ್ತುತ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬೀಡುಬಿಟ್ಟಿರುವ ಪ್ರತಿಭಟನಾಕಾರರ ಸಂಖ್ಯೆಯು ಗರಿಷ್ಟ ಮಟ್ಟದಲ್ಲಿದೆ. ಆ ಭಾಗದಲ್ಲಿ ಅಷ್ಟು ಪ್ರಮಾಣದ ಹೋರಾಟಗಾರರು ಸಾಕು. ಇದೀಗ ಈ ಹೋರಾಟ ದೇಶದೆಲ್ಲೆಡೆ ಪಸರಿಸುತ್ತಿದೆ. ದೆಹಲಿ ಗಡಿಯಲ್ಲಿರುವ ಪ್ರತಿಭಟನಾಕಾರರ ಮೇಲೆ ಸರ್ಕಾರವು ತನ್ನ ಬಲವನ್ನು ಬಳಸಲು ಪ್ರಯತ್ನಿಸಿದಂತೆಲ್ಲಾ, ಇನ್ನೂ ಅನೇಕರು ರೈತರಿಗೆ ಬೆಂಬಲವನ್ನು ನೀಡಲು ಮುಂದಾಗುತ್ತಾರೆ” ಎಂದು ಅವರು ಒತ್ತಿ ಹೇಳಿದರು.

ಚಳವಳಿಯಲ್ಲಿ ರಾಕೇಶ್ ಟಿಕಾಯತ್ ಅವರ ಪಾತ್ರವೇನು?

ಜನವರಿ 26 ರ ನಂತರ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್‌ ಪ್ರತಿಭಟನೆಯನ್ನು ಜೀವಂತವಾಗಿಡುವ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು. ಆದಾಗ್ಯೂ, ಟಿಕಾಯತ್‌ ಪಾತ್ರವನ್ನು ಮಾಧ್ಯಮಗಳು ಉತ್ಪ್ರೇಕ್ಷೆ ಮಾಡುತ್ತಿವೆ ಎಂದು ಡಾ ಪಾಲ್ ಅಭಿಪ್ರಾಯಪಟ್ಟಿದ್ದಾರೆ.

“ರಾಕೇಶ್ ಟಿಕಾಯತ್‌ ಅವರು ಮಾಡುತ್ತಿರುವ ಕೆಲಸದ ಪ್ರಮಾಣ ಮತ್ತು ಅವರಿಗೆ ಮಾಧ್ಯಮಗಳು ನೀಡುತ್ತಿರುವ ಯತ್ಪ್ರೇಕ್ಷೆ, ಎರಡರ ಮಧ್ಯೆ ವ್ಯತ್ಯಾಸಗಳಿವೆ. ಮಾಧ್ಯಮಗಳು ಪ್ರತಿಭಟನೆಯಲ್ಲಿ ಅವರ ಪಾತ್ರವನ್ನು ಉತ್ಪ್ರೇಕ್ಷಿಸುತ್ತಿವೆ. ಅವರು ಹೇಳಿಕೆ ನೀಡಿದರೆ, ಅವರ ಹೆಚ್ಚಿನ ಹೇಳಿಕೆಗಳು ಆ ಸಂದರ್ಭದಲ್ಲಿ-ಪ್ರತಿಭಟನೆಯಲ್ಲಿ ಅನುಸರಿಸಲಾಗುವುದಿಲ್ಲ ಎಂಬ ವಾಸ್ತವದ ಹೊರತಾಗಿಯೂ, ಮಾಧ್ಯಮಗಳು ಅವರನ್ನು ದೊಡ್ಡದಾಗಿ ಬಿಂಬಿಸುತ್ತಿವೆ.” – ಡಾ. ಪಾಲ್‌

“ಟಿಕಾಯತ್‌ ಅವರ ಕೆಲಸದ ಶೈಲಿ ಮತ್ತು ಅವರ ನಡವಳಿಕೆ ವೈಯಕ್ತಿಕ ಒಕ್ಕೂಟಗಳಂತಿದೆ. ಆದರೆ, ಪಂಜಾಬ್‌ನ ಒಕ್ಕೂಟಗಳು ಹೆಚ್ಚು ಪ್ರಜಾಪ್ರಭುತ್ವ ಸ್ವರೂಪದಲ್ಲಿವೆ. ಎಲ್ಲಾ ಸಂಘಟನೆಗಳ ನಾಯಕರು ಸಮಾಲೋಚನೆ ನಡೆಸಿದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ಕಾರಣದಿಂದಾಗಿಯೇ ಪ್ರತಿಭಟನೆಗಳು ಇಲ್ಲಿಯವರೆಗೆ ತಲುಪಿವೆ”ಎಂದು ಅವರು ಹೇಳಿದರು.

ಮೂರು ತಿಂಗಳುಗಳ ನಂತರ, ಕೇಂದ್ರ ಸರ್ಕಾರಕ್ಕೆ ಯಾವ ಸಂದೇಶ ನೀಡುತ್ತೀರಿ?

ಕಾರ್ಖಾನೆ ಅಥವಾ ಹಳ್ಳಿಯ ಜನರು ಪ್ರತಿಭಟನೆ ನಡೆಸುತ್ತಿಲ್ಲ. ಆದರೆ ಭಾರತದಾದ್ಯಂತದ ರೈತರು ಮೂರು ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ  ಎಂಬುದನ್ನು ಬಿಜೆಪಿ ಮತ್ತು ಅದರ ಎನ್‌ಡಿಎ ಮಿತ್ರಪಕ್ಷಗಳು ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

“ಈ ಸಮಸ್ಯೆಗಳು ದೇಶಾದ್ಯಂತ ಇರುವ ರೈತರಿಗೆ ಸಂಬಂಧಿಸಿವೆ. ಬಿಜೆಪಿಯೇತರ ಎಲ್ಲಾ ಅಂಗಸಂಸ್ಥೆಗಳು, ರೈತ ಸಂಘಗಳು ಒಟ್ಟಾಗಿ ಸಂಯುಕ್ತ ಕಿಸಾನ್ ಮೋರ್ಚಾವನ್ನು ರೂಪಿಸಿವೆ. ರೈತರು ಸಮಾಜದ ಬೆನ್ನುಮೂಳೆಯಾಗಿದ್ದಾರೆ; ಮತ್ತು ಅವರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರನ್ನು ಬೆಂಬಲಿಸಿ ಈ ಹೋರಾಟದಲ್ಲಿ ಹೆಚ್ಚು ಹೆಚ್ಚು ಜನರು ಸೇರಿಕೊಳ್ಳುತ್ತಾರೆ. ಇದು ಪ್ಯಾನ್-ಇಂಡಿಯಾ ಚಳುವಳಿಯಾಗಿ ಬಿಜೆಪಿಗೆ ಚುನಾವಣಾ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಡಾ. ದರ್ಶನ್ ಪಾಲ್ ಹೇಳಿದ್ದಾರೆ.

ಕೃಪೆ: ದಿ ಕ್ವಿಂಟ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ

 


ಇದನ್ನೂ ಓದಿ: ರೈತ ಹೋರಾಟಕ್ಕೆ 100 ದಿನ: ಸರ್ಕಾರದ ದಮನ vs ಪುಟಿದೇಳುತ್ತಿರುವ ರೈತರು!

 

Spread the love

Leave a Reply

Your email address will not be published. Required fields are marked *