ಮಗಳ ಮೇಲೆ ಅತ್ಯಾಚಾರ; ದೂರು ನೀಡಿದ ತಂದೆಯ ಮೇಲೆ ಟ್ರಕ್‌ ಹರಿಸಿ ಕೊಲೆಗೈದ ದುಷ್ಕರ್ಮಿಗಳು!

ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಕ್ಕಾಗಿ ಸಂತ್ರಸ್ತೆಯ ತಂದೆಯ ಮೇಲೆ ಟ್ರಕ್‌ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ ಜಿಲ್ಲೆಯ ಗ್ರಾಮವೊಂದರ 13 ವರ್ಷದ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆರೋಪಿಗಳ ವಿರುದ್ಧ ದೂರು ದಾಖಲಿದಿದ್ದ ಸಂತ್ರಸ್ತೆಯ ತಂದೆ, ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ, ದುಷ್ಕರ್ಮಿಗಳು ಆಸ್ಪತ್ರೆಯ ಹೊರಭಾಗದಲ್ಲಿ ತಂದೆಯ ಮೇಲೆ ಟ್ರಕ್‌ ಹರಿಸಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಯಾಗಿರುವ ಗೋಲು ಯಾದವ್‌‌ ಎಂಬಾತನನ್ನು ಬಂಧಿಸಲಾಗಿದೆ. ಆತನ ತಂದೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದು, ಪ್ರಕರಣ ದಾಖಲಾದಾಗಿನಿಂದ ಆರೋಪಿಗಳು ಮತ್ತು ಅವರ ಕುಟುಂಬ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಪೊಲೀಸರು ಸಹಕರಿಸುತ್ತಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬವು ಪೊಲೀಸರ ವಿರುದ್ಧ ಆರೋಪಿಸಿದ್ದಾರೆ.

Read Also: ದೂರು ನೀಡಲು ಪೋಲೀಸ್ ಠಾಣೆಗೆ ಹೋದ ಮಹಿಳೆ ಮೇಲೆ ಅತ್ಯಾಚಾರ…!

“ನನ್ನ ಮಗನನ್ನು ಕೊಲೆ ಮಾಡಲಾಗಿದೆ, ಪೊಲೀಸರು ಇದಕ್ಕೆ ಸಹಕರಿಸಿದ್ದಾರೆ” ಎಂದು ಸಾವನ್ನಪ್ಪಿದ ವ್ಯಕ್ತಿಯ ತಂದೆ ಆರೋಪಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

“ನಾವು ದೂರು ಸಲ್ಲಿಸಿದ ಕೂಡಲೇ, ಮುಖ್ಯ ಆರೋಪಿ ಹಿರಿಯ ಸಹೋದರ ನಮಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ‘ನನ್ನ ತಂದೆ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ ಉಷಾರಾಗಿರಿ’ ಎಂದು ಆತ ನಮಗೆ ಬೆದರಿಕೆ ಹಾಕಿದ್ದಾನೆ” ಎಂದು ಸಂತ್ರಸ್ತೆಯ ಕುಟುಂಬದ ಮತ್ತೊಬ್ಬರು ತಿಳಿಸಿದ್ದಾರೆ.

“ವೈದ್ಯಕೀಯ ಪರೀಕ್ಷೆ ನಡೆಯುತ್ತಿರುವಾಗ, ಮೃತ ವ್ಯಕ್ತಿ ಚಹಾ ಕುಡಿಯುವುದಕ್ಕಾಗಿ ಹೊರಗೆ ಹೋಗಿದ್ದರು. ಆ ಸಮಯದಲ್ಲಿ, ಟ್ರಕ್ ಅಪಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಕಾನ್ಪುರ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದರು. ನಾವು ಅಪಘಾತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ “ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಡಾ.ಪ್ರೀತಿಂದರ್ ಸಿಂಗ್ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾನ್ಪುರ ಪೊಲೀಸರು ಮಂಗಳವಾರ ಸಾಮೂಹಿಕ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದರು.

“ತಂದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ನಾವು ಕೂಡಲೇ ಅದರ ಮೇಲೆ ಕ್ರಮ ಕೈಗೊಂಡಿದ್ದೇವೆ. ಸಂತ್ರಸ್ತ ಬಾಲಕಿ ಆರೋಗ್ಯ ಸ್ಥಿರವಾಗಿದೆ. ಪ್ರಕರಣದ ತನಿಖೆಗಾಗಿ ನಾವು ಐದು ತಂಡಗಳನ್ನು ರಚಿಸಿದ್ದೇವೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಬ್ರಿಜೇಶ್ ಶ್ರೀವಾಸ್ತವ ಮಂಗಳವಾರ ಹೇಳಿದ್ದರು.

ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, ಎರಡು ಪ್ರಕರಣಗಳ ತ್ವರಿತ ತನಿಖೆಗೆ ಯುಪಿ ಪೊಲೀಸರು ಕಾನ್ಪುರ ಪೊಲೀಸರಿಗೆ ಆದೇಶಿಸಿದೆ. ಜೊತೆಗೆ ಅಪಘಾತ ಮಾಡಿದ ಟ್ರಕ್ ವಶಪಡಿಸಿಕೊಂಡು, ಚಾಲಕನನ್ನು ಬೇಗ ಬಂಧಿಸುವಂತೆ ಹೇಳಿದೆ.

Read Also: ಬಾಲಕಿ ಮೇಲೆ 08 ದಿನಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights