ಕಾನೂನು ಬಾಹಿರ ವರ್ಗಾವಣೆ; 7 ದಿನಗಳಿಂದ ಉದಯ ಟಿವಿ ಸಿಬ್ಬಂದಿ ಪ್ರತಿಭಟನೆ!

ಕಾನೂನು ಬಾಹಿರವಾಗಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ, ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಉದಯ ಟಿವಿ ಸಿಬ್ಬಂದಿ ಬೆಂಗಳೂರಿನ ಮಾರನ್ ಟವರ್ಸ್ ಮುಂದೆ ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ.

ನವೆಂಬರ್‌ 26 ರಂದು ಆರಂಭಿಸಿರುವ ಪ್ರತಿಭಟನೆ ಇನ್ನು ನಡೆಯುತ್ತಲೇ ಇದೆ. ಇತ್ತ ದೇಶದ ರೈತರು ಚಳಿ, ಮಳೆ ಎನ್ನದೇ ಕೃಷಿ ಕಾನೂನುಗಳ ವಿರುದ್ಧ ಹೋರಾಡುತಿದ್ದರೆ, ಉದಯ ಟಿವಿ ನೌಕರರು ಕೂಡ ಚಳಿ, ಮಳೆಯ ನಡುವೆಯೇ ಉದಯ ಟಿವಿ ಕಚೇರಿಯ ಮುಖ್ಯದ್ವಾರದಲ್ಲಿ ಕೂತು ಮೌನ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಆಡಳಿತ ಮಂಡಳಿಯ ಅನುಚಿತ ನೀತಿ, ಕಾನೂನುಬಾಹಿರ ವರ್ಗಾವಣೆಯನ್ನು ಖಂಡಿಸಿ ಏಳನೇಯ ದಿನ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

ರಾಜ್ಯದಲ್ಲಿ ಇಪ್ಪತ್ತೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಜನಪ್ರಿಯ ವಾಹಿನಿಯಾದ ಉದಯ ಟಿವಿ ಆಡಳಿತ ಮಂಡಳಿ, ಸಂಸ್ಥೆಯಲ್ಲಿ ಕಾರ್ಮಿಕ ಸಂಘ ಅಸ್ಥಿತ್ವಕ್ಕೆ ಬಂದಿರುವುದನ್ನು ಸಹಿಸಿಕೊಳ್ಳಲಾಗದೇ, ಪ್ರತಿಕಾರವಾಗಿ ಭಾಷೆಯೇ ಗೊತ್ತಿಲ್ಲದ ಸಿಬ್ಬಂದಿಯನ್ನು ಬಂಗಾಲಿ, ಹಿಂದಿ, ಮರಾಠಿ ಭಾಷೆಯ ಪ್ರದೇಶಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರತಿಭಟನಾನಿರತ ಸಿಬ್ಬಂದಿ ವರ್ಗ ಆರೋಪಿಸಿದೆ.

’ಸಂಸ್ಥೆ ಕೆಲಸ ನೀಡಲು ನಿರಾಕರಿಸಿದೆ. ಮೂರು ತಿಂಗಳಿಂದ ವೇತನವಿಲ್ಲದೇ ನಮ್ಮ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ನಮಗೆ ಭಾಷೆ ಗೊತ್ತಿಲ್ಲದ ಪ್ರದೇಶದಲ್ಲಿ, ಕೇವಲ ಹತ್ತು ಸಾವಿರ ರೂಪಾಯಿ ಸಂಬಳದಲ್ಲಿ ಕೋಲ್ಕತ್ತಾ ಹೋಗಿ ಹೇಗೆ ಕೆಲಸ ಮಾಡಬೇಕು..?” ಎಂದು ನೌಕರ ರಾಜೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆಡಳಿತ ಮಂಡಳಿ ಸ್ಟ್ಯಾಂಡಿಂಗ್ ಆರ್ಡರ್ ಜಾರಿಗೆ ತರದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ. ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ನೀಡದೇ ಇರುವುದನ್ನು ಪ್ರಶ್ನಿಸಿದಕ್ಕೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಸನ್ ಟಿವಿ ನೆಟ್‌ವರ್ಕ್, ಬೆಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ದೂರದ ಕೋಲ್ಕತಾ, ನೋಯ್ಡಾ, ಮುಂಬಯಿ, ಹೈದರಾಬಾದ್, ಚೆನ್ನೈ ನಗರಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆ ಒಪ್ಪದ ಸಿಬ್ಬಂದಿಗೆ ಕೆಲಸ ನೀಡದೇ ಹೊರಗಟ್ಟಿದೆ.


ಇದನ್ನೂ ಓದಿ: ಯಾರದ್ದೋ ಕವಿತೆಯನ್ನು ತನ್ನ ಪತ್ನಿ ಬರೆದಿದ್ದಾರೆಂದು ಹೇಳಿ ಟ್ರೋಲ್‌ ಆದ ಮಧ್ಯಪ್ರದೇಶ ಸಿಎಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights