ತಮಿಳುನಾಡು: DMK ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ 10ನೇ ಗೆಲುವಿಗಾಗಿ ಹೋರಾಟ!

ಏಪ್ರಿಲ್ 6 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಅವರು 12 ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, 10ನೇ ಗೆಲುವಿಗಾಗಿ ಕಣಕ್ಕೆ ಇಳಿದಿದ್ದಾರೆ. 1996 ರಿಂದ ಅವರ ಕೋಟೆಯಾಗಿ ಉಳಿದಿರುವ ಕಟ್ಪಾಡಿ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ.

ಕಳೆದ ವರ್ಷ ಡಿಎಂಕೆ ಪಕ್ಷದ ಖಜಾಂಚಿ ಸ್ಥಾನದಿಂದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದುಕೊಂಡಿರುವ ಮುರುಗನ್‌, 1971 ರಿಂದ ರಾಜಕೀಯದ ಚುನಾವಣಾ ಕಣದಲ್ಲಿ ಮಿಂಚುತಿದ್ದಾರೆ. ಅವರು ಇಲ್ಲಿಯವರೆಗೆ ಹನ್ನೊಂದು ಬಾರಿ ಸ್ಪರ್ಧಿಸಿದ್ದಾರೆ, ಒಂಬತ್ತು ಬಾರಿ ಗೆಲುವು ಸಾಧಿಸಿದ್ದಾರೆ. ಅವರು 1984 ಮತ್ತು 1991 ರಲ್ಲಿ ಕೇವಲ ಎರಡು ಬಾರಿ ಮಾತ್ರ ತಮ್ಮ ಎಐಎಡಿಎಂಕೆ ಪ್ರತಿಸ್ಪರ್ಧಿಗಳ ವಿರುದ್ಧ ಸೋತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ .

“ಅವರು ಕಟ್ಪಾಡಿಯಲ್ಲಿ ಏಳು ಬಾರಿ ಮತ್ತು ರಾಣಿಪೇಟೆಯಲ್ಲಿ ಎರಡು ಬಾರಿ ಗೆದ್ದಿದ್ದಾರೆ” ಎಂದು ವೆಲ್ಲೂರು ಸಂಸದ ಮತ್ತು ದುರೈ ಮುರುಗನ್ ಅವರ ಪುತ್ರ ಡಿ.ಎಂ.ಕಥೀರ್ ಆನಂದ್ ತಿಳಿಸಿದ್ದಾರೆ.

ಹಾಸ್ಯ ಮತ್ತು ವಿಡಂಬನೆಗೆ ಹೆಸರುವಾಸಿಯಾದ ದುರೈ ಮುರುಗನ್, ಪ್ರಸ್ತುತ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕರಾಗಿದ್ದಾರೆ. ಸದನದಲ್ಲಿ ಚರ್ಚೆಯ ಸಮಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಥವಾ ವಿರೋಧ ಪಕ್ಷದಲ್ಲಿದ್ದಾಗಲೂ ಅವರ ಮಾತುಗಳು ಮತ್ತು ಟೀಕೆಗಳು ಹಾಸ್ಯ ಮತ್ತು ವ್ಯಂಗ್ಯದಿಂದ ಕೂಡಿರುತ್ತವೆ.

ದುರೈ ಮುರುಗನ್ ಅವರ ವರ್ಷಸ್ಸಿನಿಂದಾಗಿ ವೆಲ್ಲೂರು ಪ್ರದೇಶದಲ್ಲಿ ಪಕ್ಷದ ಪ್ರಾಬಲ್ಯವನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಪಕ್ಷದ ಸಂಘಟನೆಯ ವ್ಯವಹಾರಗಳನ್ನು ಮತ್ತು ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸುತ್ತಾರೆ.

ಆದರೆ, ತಮ್ಮ ಮಗನನ್ನು ಲೋಕಸಭೆಯ ಸದಸ್ಯರನ್ನಾಗಿ ಮಾಡುವ ಮೂಲಕ, ಆತನನ್ನು ತಮ್ಮ ಪಕ್ಷದಲ್ಲಿ ಪ್ರಭಾವಿಯಾಗಿ ಬೆಳೆಸಲು ಮುಂದಾಗಿದ್ದಾರೆ. ಇದು ವೆಲ್ಲೂರು ಪ್ರದೇಶದ ಪಕ್ಷದ ಸಂಘಟನೆಯೊಳಗೆ ಗೊಣಗಾಟಕ್ಕೆ ಕಾರಣವಾಗಿದೆ.

ಪ್ರಸಕ್ತ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಎಸ್ ರಾಮು ಅವರು ದುರೈ ಮುರುಗನ್‌ ವಿರುದ್ದ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: BJPಯ ಹುಮ್ಮಸ್ಸು ಕುಗ್ಗಿಸಲಿವೆ 04 ರಾಜ್ಯಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights