ಗೆಹ್ಲೋಟ್‌ ಸರ್ಕಾರದಲ್ಲಿ ಮತ್ತೆ ಬಂಡಾಯ; ರಾಜೀನಾಮೆ ನೀಡುವುದಾಗಿ ದಲಿತ ಶಾಸಕರ ಎಚ್ಚರಿಕೆ!

ಕಳೆದ ವರ್ಷ ರಾಜಕೀಯ ಬಿಕ್ಕಟ್ಟನ್ನು ಸುಧಾರಿಸಿ ಅಧಿಕಾರ ಉಳಿಸಿಕೊಂಡ ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌ ಅವರ ಸರ್ಕಾರದಲ್ಲಿ ಇದೀಗ ಮತ್ತೆ ಬಂಡಾಯದ ಕಾವು ಕಾಣಿಸಿಕೊಳ್ಳುತ್ತಿದೆ. ಸರ್ಕಾರದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಶಾಸಕರ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಮೂರು ಕಾಂಗ್ರೆಸ್‌ ಶಾಸಕರು ಅಸಮಾಧಾನ ಹೊರಹಾಕಿದ್ದು, ಒಬ್ಬ ಶಾಸಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಕಾಂಗ್ರೆಸ್‌ನ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಶಾಸಕರಾದ ಮಾಜಿ ಸಚಿವ, ಹಾಲಿ ಶಾಸಕ ರಮೇಶ್ ಮೀನಾ ಹಾಗೂ ಶಾಸಕರಾದ ಮುರಾರಿ ಲಾಲ್ ಮೀನಾ ಮತ್ತು ವೇದ ಪ್ರಕಾಶ್ ಸೋಲಂಕಿ ಅವರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದಲ್ಲಿ ಹಾಗೂ ಸದನದಲ್ಲಿ ದಲಿತ-ಅಲ್ಪಸಂಖ್ಯಾತ ಹಿನ್ನೆಲೆಯ ಶಾಸಕ ಧ್ವನಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಎಸ್‌ಸಿ / ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಎಷ್ಟು ಅನುದಾನವನ್ನು ಪಡೆದಿದ್ದಾರೆ ಎಂದು ಕಳೆದ ಮೂರು ಬಜೆಟ್‌ಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಕಾಂಗ್ರೆಸ್‌ಅನ್ನು ದುರ್ಬಲಗೊಳಿಸಲು ಮುಂದಾದವರ ವಿರುದ್ದ ನಾವು ಧ್ವನಿಎತ್ತಿದ್ದೇವೆ. ಆದರೆ, ಸರ್ಕಾರದಲ್ಲಿ ನಮಗೆ ಮಾತನಾಡಲು ಅವಕಾಶವೇ ಇಲ್ಲ. ಸಚಿವರು ನಮ್ಮನ್ನು ಭೇಟಿಯನ್ನೂ ಮಾಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್‌ ಮೀನಾ ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ಆಯ್ದ ಕೆಲವರಿಗೆ ಮಾತ್ರ ಮಾತನಾಡಲು ಅವಕಾಶವಿದೆ. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ಹೆಚ್ಚಿನ ಶಾಸಕರಿಗೆ ಮೈಕ್ ಇಲ್ಲದೆ ವಿಧಾನಸಭೆಯಲ್ಲಿ ಸ್ಥಾನಗಳನ್ನು ನೀಡಲಾಗಿದೆ. “ಒಂದು ಕಡೆ, ನೀವು ಎಸ್‌ಸಿ / ಎಸ್‌ಟಿಯನ್ನು ಕಾಂಗ್ರೆಸ್ಸಿನ ಬೆನ್ನೆಲುಬು ಎಂದು ಪರಿಗಣಿಸುತ್ತೀರಿ ಮತ್ತು ಮತ್ತೊಂದೆಡೆ, ನೀವು ಈ ಸಮುದಾಯಗಳಿಗೆ ಸೇರಿದ ಶಾಸಕರನ್ನು ಕಡೆಗಣಿಸುತ್ತೀರಿ.  ಎರಡೂ ವಿಷಯಗಳು ಒಟ್ಟಿಗೆ ಹೋಗಲು ಸಾಧ್ಯವಿಲ್ಲ” ಎಂದು ಚಕ್ಸು ಕ್ಷೇತ್ರದ ಕಾಂಗ್ರೆಸ್ ಶಾಸಕ ವೇದ ಪ್ರಕಾಶ್ ಸೋಲಂಕಿ ಹೇಳಿದ್ದಾರೆ.

“ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತೇನೆ. ನಾನು ಭೇಟಿಗಾಗಿ ಸಮಯವನ್ನು ಕೋರಿದ್ದೇನೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಾನು ರಾಜೀನಾಮೆ ನೀಡುವುದಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಮುರಾರಿ ಲಾಲ್‌ ಮೀನಾ ಹೇಳಿದ್ದಾರೆ.

ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಪಕ್ಷದ ಶಾಸಕರು ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದರು. ಸುಮಾರು 15 ದಿನಗಳ ಕಾಲ ಸರ್ಕಾರ ಅಸ್ಥಿರ ಪರಿಸ್ಥಿತಿಯಲ್ಲಿತ್ತು. ಕಾಂಗ್ರೆಸ್‌ ಹೈಕಮಾಂಡ್‌ನ ಮನವೊಲಿಕೆಯಿಂದ ಸಚಿನ್‌ ಮತ್ತೆ ಸರ್ಕಾರದ ಜೊತೆಗೆ ಮುಂದುವರೆದಿದ್ದಾರೆ. ಈ ವೇಳೆ ರಮೇಶ್‌ ಮೀನಾ ಅವರನ್ನು ಸಚಿವ ಸಂಪುಟದಿಂದ ಹೊರಗಿಡಲಾಗಿತ್ತು. ಇದೀಗ ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಂಗಾಳ, ಅಸ್ಸಾಂ ಫಲಿತಾಂಶವು ಬಿಹಾರದ BJP-JDU ಸರ್ಕಾರದ ಉಳಿವನ್ನು ನಿರ್ಧರಿಸುತ್ತವೆ: ಮೂಲಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights