ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ; ಜಿ-23 ನಾಯಕರಿಗಿಲ್ಲ ಅವಕಾಶ; ಪಕ್ಷದಲ್ಲಿ ಮತ್ತೆ ಅಸಮಾಧಾನ!

ಪಂಚರಾಜ್ಯಗಳ ಚುನಾವಣೆ ರಂಗೇರಿದೆ. ಎಲ್ಲಾ ಪಕ್ಷಗಳು ತಮ್ಮ ಸ್ಟಾರ್‌ ಪ್ರಚಾರಕ ಪಟ್ಟಿಯನ್ನು ಪ್ರಕಟಿಸುತ್ತಿವೆ. ಈ ಪೈಕಿ ಕಾಂಗ್ರೆಸ್‌ ಕೂಡ ಪಕ್ಷದ ಪ್ರಮುಖ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಜಿ-23 ಎಂದು ಕರೆಸಿಕೊಳ್ಳುವ ಹಿರಿಯ ನಾಯಕರನ್ನು ಕೈಬಿಡಲಾಗಿದೆ. ಇದು ಪಕ್ಷದ ಒಳಗೆ ಮತ್ತಷ್ಟು ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷವು 30 ನಾಯಕರನ್ನು ಸ್ಟಾರ್‌ ಪ್ರಚಾರಕರನ್ನಾಗಿ ಆಯ್ಕೆ ಮಾಡಿದೆ. ಇದರಲ್ಲಿ ಜಿ-23 (ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ಸೋನಿಯಾಗಾಂಧಿಗೆ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರನ್ನು ಗ್ರೂಪ್-23 ಅಥವಾ ಜಿ-23 ಎಂದು ಕರೆಯಲಾಗುತ್ತಿದೆ) ನಾಯಕರನ್ನು ಕೈಬಿಡಲಾಗಿದೆ.

ಚುನಾವಣಾ ಪ್ರಚಾರ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಚಿನ್ ಪೈಲಟ್, ನವ್ಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ, ಮೊಹಮ್ಮದ್ ಅಜರುದ್ದೀನ್, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಚತ್ತೀಸ್ ಗಢದ ಸಿಎಂ ಭೂಪೇಶ್ ಭಗೇಲ್, ಮುಕುಲ್ ವಾಸ್ನಿಕ್, ಅಸ್ಸಾಂ ನ ಕಾಂಗ್ರೆಸ್ ಉಸ್ತುವಾರಿ ಜಿತೇಂದ್ರ ಸಿಂಗ್, ವಿಕಾಸ್ ಉಪಾಧ್ಯಾಯ, ಅನಿರುಧ್ ಸಿಂಗ್ ಅರುಣಾಚಲ ಪ್ರದೇಶದ ಮಾಜಿ ಸಿಎಂ ನಬಂ ಟುಕಿ, ಮೇಘಾಲಯದ ಮಾಜಿ ಸಿಎಂ ಡಾ.ಮುಕುಲ್ ಸಂಗ್ಮ ಸೇರಿದಂತೆ 30 ನಾಯಕರ ಹೆಸರುಗಳನ್ನು ಸೇರಿಸಲಾಗಿದೆ.

ಜಿ-23ಯ ಪ್ರಮುಖ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮ, ಕಪಿಲ್ ಸಿಬಲ್, ಮನೀಷ್ ತಿವಾರಿ ಅವರುಗಳ ಹೆಸರನ್ನು ಪ್ರಚಾರ ಪಟ್ಟಿಯಿಂದ ಕೈಬಿಡಲಾಗಿದೆ.

ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಸಂದೀಪ್‌ ದೀಕ್ಷಿತ್‌, “ಪ್ರಚಾರಕರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದು-ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, ಚುನಾವಣೆಗಳನ್ನು ಗೆಲ್ಲುವುದಕ್ಕೆ ಕೇವಲ 30 ಮಂದಿ ನಾಯಕರಷ್ಟೇ ಸಾಕು ಎಂಬುದಾದರೆ ಒಳ್ಳೆಯದು. ಉಳಿದರೆ, ಪಕ್ಷಕ್ಕೆ ಬೇರೆ ನಾಯಕರ ಅಗತ್ಯ ಏನಿದೆ” ಎಂದು ಪ್ರಶ್ನಿಸಿದ್ದಾರೆ.

ಫೆ.28 ರಂದು ಜಿ-23 ಯ ಪ್ರಮುಖ ನಾಯಕರು ಜಮ್ಮುವಿನಲ್ಲಿ ಸಮಾವೇಶ ನಡೆಸಿದಾಗ, ಕುಟುಂಬ ನಿಷ್ಠರು ಚುನಾವಣೆಯಲ್ಲಿ ಪ್ರಚಾರ ನಡೆಸುವಂತೆ ನಾಯಕರಿಗೆ ಬೋಧನೆ ಮಾಡಿದ್ದರು. ಆದರೆ ಈಗ ಪ್ರಚಾರ ಮಾಡುವುದಕ್ಕೆ ಪಟ್ಟಿಯಲ್ಲಿ ಅವರ ಹೆಸರುಗಳನ್ನೇ ಸೇರಿಸಿಲ್ಲ ಎಂದು ಪಕ್ಷದ ನಡೆಯನ್ನು ದೀಕ್ಷಿತ್ ಟೀಕಿಸಿದ್ದಾರೆ.

ಇತ್ತೀಚೆಗೆ ಗುಲಾಮ್‌ ನಬೀ ಅಜಾದ್‌ ಅವರು ರಾಜ್ಯಸಭಾ ಕಲಾಪದಲ್ಲಿ ಮತ್ತು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು. ಅಲ್ಲದೆ, ಮೋದಿಯವರು ಅಜಾದ್‌ ಅವರ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿ, ಭಾವುಕರಾಗಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ BJP ಎಂಥ ಪರಿಸ್ಥಿತಿ ತಲುಪಿದೆ; ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿದ್ದಕ್ಕೆ BJP ಮುಖಂಡ ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights