ಫ್ಯಾಕ್ಟ್‌ಚೆಕ್ : ಶ್ರಾವಣ ಮಾಸದಲ್ಲಿ ರಾಹುಲ್ ಗಾಂಧಿ ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೋಟೆಲ್‌ನಲ್ಲಿ ಚಿಕನ್ ಲೆಗ್ ಪೀಸ್ ಮತ್ತು ತಂದೂರಿ ರೋಟಿ ಸವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮನ್ನು ‘ದತ್ತಾತ್ರೇಯ ಬ್ರಾಹ್ಮಣ’ ಎಂದು ಬಣ್ಣಿಸಿಕೊಳ್ಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರಾವಣ ಮಾಸದಲ್ಲಿ ಚಿಕನ್ ಸವಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಪವಿತ್ರ ಶ್ರಾವಣ ಮಾಸದಲ್ಲಿ, ಸ್ವಯಂಘೋಷಿತ ಬ್ರಾಹ್ಮಣ, ದತ್ತಾತ್ರೇಯ @ರಾಹುಲ್ ಗಾಂಧಿ ಕೋಳಿ ತಿನ್ನುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಶರವಣ ಕುಮಾರ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ರೆಸ್ಟೋರೆಂಟ್‌ ಒಂದಕ್ಕೆ ಪ್ರವೇಶಿಸುವ ಮತ್ತು ಅಲ್ಲಿ ಮಾಂಸಾಹಾರ ತಿನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ವಿಡಿಯೊ ಜತೆಗೆ, ‘ನೋಡಿ, ಶ್ರಾವಣ ಮಾಸದಲ್ಲಿ ರಾಹುಲ್ ಗಾಂಧಿ ಮಾಂಸ ತಿನ್ನುತ್ತಿದ್ದಾರೆ. ಈ ಕಾರಣದಿಂದಲೇ ಜನರು ರಾಹುಲ್ ಅವರನ್ನು ಕುರಿತು ‘ಆಗಾಗ ಹಿಂದೂ ಆಗುತ್ತಾರೆ’ ಎಂದು ಹೇಳುವುದು’ ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 23, 2023 ರಂದು  “ದಿಲ್ಲಿ ಮೇ ಚೋಲೆ ಭತುರೆ ಔರ್ ಮೊಹಬ್ಬತ್ ಕಾ ಶರ್ಬತ್” ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.

ಯೂಟ್ಯೂಬ್‌ನಲ್ಲಿ ಲಭ್ಯವಾದ ಮೂಲ ವಿಡಿಯೋ  21 ನಿಮಿಷಗಳ ಅವಧಿಯಲ್ಲಿದ್ದು,  12 ನಿಮಿಷ 40 ಸೆಕೆಂಡುಗಳಲ್ಲಿ ಬರುವ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ಆಗಸ್ಟ್ 7, 2023 ರಂದು ಪ್ರಕಟಿಸಿದ ಲೇಖನದ ಪ್ರಕಾರ, ಪವಿತ್ರ ಶ್ರಾವಣ ಮಾಸವು 2023 ಜುಲೈ 4 ರಂದು ಪ್ರಾರಂಭವಾಗಿ, ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ ಎಂದು ಉಲ್ಲೇಖಿಸಿದೆ. ರಾಹುಲ್ ಗಾಂಧಿಯವರ ಚಿಕನ್ ಸವಿಯುತ್ತಿರುವ ಈ ವೈರಲ್ ವಿಡಿಯೊವನ್ನು ಶ್ರಾವಣ ಮಾಸ ಪ್ರಾರಂಭವಾಗುವ  ಮೊದಲೇ ಚಿತ್ರೀಕರಿಸಿರುವುದು ಸ್ಪಷ್ಟವಾಗಿದೆ.

ಶ್ರಾವಣ ಮಾಸ ಜುಲೈ 4ರಿಂದ ಆರಂಭವಾಗಿತ್ತು. ಆದರೆ ಈ ವಿಡಿಯೊ 2023ರ ಏಪ್ರಿಲ್‌ 22ರಂದು ಚಿತ್ರೀಕರಿಸಿದ್ದು. ಪತ್ರಕರ್ತ ಕುನಾಲ್‌ ವಿಜಯ್‌ಕರ್‌ ಅವರಿಗೆ ಸಂದರ್ಶನ ನೀಡುವ ವೇಳೆ ಈ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು. ಸಂದರ್ಶನದ ವೇಳೆ ರಾಹುಲ್ ಅವರು ದೆಹಲಿಯ ಅಲ್‌ ಜವಾಹರ್‌ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದರು. ಅಲ್ಲಿ ರಾಹುಲ್‌ ಮಾಂಸ ತಿಂದಿದ್ದರು. ರಾಹುಲ್‌ ಗಾಂಧಿ ಅವರು ಆ ವಿಡಿಯೊವನ್ನು ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಅದೇ ವಿಡಿಯೊವನ್ನು ಬಳಸಿಕೊಂಡು, ರಾಹುಲ್‌ ಶ್ರಾವಣ ಮಾಸದಲ್ಲಿ ಮಾಂಸ ತಿನ್ನುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಒಟ್ಟಾರೆಯಾಗ ಹೇಳುವುದಾದರೆ, ರಾಹುಲ್ ಗಾಂಧಿಯವರ ಮೂರು ತಿಂಗಳ ಹಿಂದಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡು, ರಾಹುಲ್ ಹಿಂದೂ ವಿರೋಧಿ ಎಂಬ ತಪ್ಪು ಭಾವನೆಯನ್ನು ಜನರಲ್ಲಿ ಮೂಡಿಸುವ ದುರುದ್ದೇಶದಿಂದ ಹಂಚಿಕೊಳ್ಳಲಾಗಿದೆ.

ಅಲ್ಲದೆ ಆಹಾರ ಪ್ರತಿಯೊಬ್ಬರ ವಯಕ್ತಿಕ ಆಯ್ಕೆ, ಒಂದು ವೇಳೆ ರಾಹುಲ್ ಗಾಂಧಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದರೆ ಅದು ಅಪರಾದವಲ್ಲ. ಅವರ ಆಹಾರದ ಹಕ್ಕನ್ನು ಗೌರವಿಸಬೇಕು. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಎಷ್ಟು ಸರಿ?

ಕೃಪೆ: ಟೈಮ್ಸ್‌ ಆಫ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಉತ್ತಮ ಪ್ರಧಾನಿ ಆಗುತ್ತಾರೆ ಎಂದು ಬಿಜೆಪಿ ನಾಯಕಿ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights