ಆರೋಪವಿರುವ ಶಶಿಕಲಾ ಬದಲು ನನಗೆ ಸಚಿವ ಸ್ಥಾನ ಕೊಡಬಹುದಿತ್ತು- ಪೂರ್ಣಿಮಾ ಶ್ರೀನಿವಾಸ್
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರಿಕೊಂಡಿದ್ದಾರೆ. ಸಚಿವರ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ. ಸಚಿವಾಕಾಂಕ್ಷಿಗಳು ಮಾತ್ರವಲ್ಲದೇ ಅವರ ಬೆಂಬಲಿಗರೂ ಪ್ರತಿಭಟನೆ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೊನೆ ಕ್ಷಣದವರೆಗೂ ಲಿಸ್ಟ್ ನಲ್ಲಿ ಹೆಸರಿದ್ದು ಬಳಿಕ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಧಾನಗೊಂಡಿದ್ದಾರೆ.
ಬೊಮ್ಮಾಯಿ ಸಂಪುಟಕ್ಕೆ ರಾಜುಗೌಡ, ಓಲೇಕಾರ್, ಯತ್ನಾಳ್ ಹೀಗೆ ಹಲವಾರು ಶಾಸಕರು ಸೇರಿಕೊಳ್ಳುವ ಆಸೆ ನಿರಾಸೆಯಾಗಿದೆ. ಇವರಲ್ಲಿ ಪೂರ್ಣಿಮಾ ಶ್ರೀನಿವಾಸ್ ಕೂಡ ಒಬ್ಬರು. ಇಂದು ಬೆಂಗಳೂರಿನ ಕೆ.ಆರ್. ಪುರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಿರುವದು ಬೇಸರವಾಗಿದೆ. ನನ್ನನ್ನು ಬಿಟ್ಟು ಬೇರೆ ಯಾವ ಶಾಸಕಿಯನ್ನು ಸಚಿವರನ್ನಾಗಿ ಮಾಡಿದರೆ ಬೇಸರವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಮ್ಮಲ್ಲಿ ಹಿರಿಯ ಶಾಸಕರಿದ್ದಾರೆ. ಅವರನ್ನೆಲ್ಲಾ ಕಡೆಗಣಿಸಿ ಆರೋಪ ಹೊತ್ತಿರುವ ಶಶಿಕಲಾ ಅವರಿಗೇ ಯಾಕೆ ಸಚಿವ ಸ್ಥಾನ ನೀಡಿದರೋ ಗೊತ್ತಿಲ್ಲ. ಇದಕ್ಕೆ ಪಕ್ಷವೇ ಉತ್ತರಿಸಬೇಕು.
ನನಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಯಾರನ್ನೂ ದೂರುವುದಿಲ್ಲ. ಆದರೆ ನನಗೆ ಸ್ಥಾನ ಕೊಡಬಹುದಿತ್ತು. ಸ್ಥಾನ ಸಿಗದಿದ್ದರೂ ಪರವಾಗಿಲ್ಲ ನಾನು ನನ್ನ ಜನರ ಸೇವೆ ಮುಂದುವರೆಸುತ್ತೇನೆ ಎಂದು ಹೇಳಿದರು.