ಶಾಸಕ ಜಮೀರ್ ಅಹ್ಮದ್ ಸಹೋದರ ಮುಜಾಮಿಲ್ ಅಹ್ಮದ್ ಖಾನ್ ಇಡಿ ವಶಕ್ಕೆ!
ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿ ಮಾಡಿದ್ದು ಜಮೀರ್ ಸಹೋದರನನ್ನು ವಶಕ್ಕೆ ಪಡೆದಿದೆ. ಈಗಾಗಲೇ ಜಮೀರ್ ಆಪ್ತನನ್ನು ಕೂಡ ಇಡಿ ತಂಡ ವಶಕ್ಕೆ ಪಡೆದಿದೆ ಎಂದು ಎನ್ನಲಾಗುತ್ತಿದೆ. ಜಮೀರ್ ಮನೆಗೆ ಇಡಿ ದಾಳಿ ಮಾಡುತ್ತಿದ್ದಂತೆ ಕೆರಳಿದ ಜಮೀರ್ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ಮನೆಯ ಮೇಲೆ ಬೆಳಗ್ಗೆ 6 ಗಂಟೆಗೆ ಇಡಿ ದಾಳಿ ನಡೆದಿದೆ. ಇಡಿ ಅಧಿಕಾರಿಗಳು 2 ಗಂಟೆಗಳಿಂದ ಸತತವಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಸ್ತುತ ಶಾಸಕ ಜಮೀರ್ ಅಹ್ಮದ್ ಬಂಬೂ ಬಜಾರ್ ಬಳಿಯಿರುವ ಮನೆಯಲ್ಲಿದ್ದಾರೆ.
ರಿಚ್ಮಂಡ್ ಟೌನ್ನ ಖಾಸಗಿ ಹೋಟೆಲಿನಲ್ಲಿ ಎರಡು ದಿನಗಳಿಂದ ತಂಗಿದ್ದ ಇಡಿ ಅಧಿಕಾರಿಗಳು 25 ಇನ್ನೋವಾ ಕಾರುಗಳಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ. ತದನಂತರ, ಬೆಂಗಳೂರಿನ ಇತರೆ ಇಡಿ ಅಧಿಕಾರಿಗಳೂ ಇವರಿಗೆ ಕೈಜೋಡಿಸಿದ್ದಾರೆ. ಇಡಿ ದಾಳಿ ಇಂದು ಮತ್ತು ನಾಳೆಯೂ ನಡೆಯುವ ಅಂದಾಜಿದೆ. ಈ ಮಧ್ಯೆ ಬೆಂಗಳೂರು ಪೊಲೀಸರು ಇಡಿ ಅಧಿಕಾರಿಗಳಿಗೆ ಸಾಥ್ ನೀಡಿದ್ದು, ಭಾರೀ ಪ್ರಮಾಣದಲ್ಲಿ ಬಿಗಿ ಬಂದೋಬಸ್ ಮಾಡಲಾಗಿದೆ. ಭದ್ರತೆಗೆ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಇಂದು (ಆಗಸ್ಟ್ 5) ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ರವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಸೇರಿದಂತೆ ಹಲವು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳಿಗೆ ಜಮೀರ್ ಅಹ್ಮದ್ ವಿರುದ್ಧ ಎನ್.ಆರ್.ರಮೇಶ್ ಇಡಿಗೆ ದೂರು ನೀಡಿದ್ದರು. 80 ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಎನ್.ಆರ್.ರಮೇಶ್ ದೂರು ನೀಡಿದ್ದರು. 14984 ಚದರಡಿ ವಿಸ್ತೀರ್ಣ ಜಾಗವನ್ನ ಜಮೀರ್ ಮಾರಾಟ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್.ಆರ್.ರಮೇಶ್ ಇಡಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಮೀರ್ ವಿಚಾರಣೆಯನ್ನ ಎದುರಿಸಿದ್ದರು. ಮೂರು ತಿಂಗಳಲ್ಲಿ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆದರೆ ಮಾಹಿತಿ ನೀಡಿಲ್ಲವೆಂಬುದು ತಿಳಿದುಬಂದಿದೆ.
ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಹೆಸರು ಕೇಳಿಬಂದಿತ್ತು. ಹೂಡಿಕೆ ಮಾಡಿದವರಿಗೆ ನಾಮ ಹಾಕಿ ಪರಾರಿಯಾಗಿದ್ದ ಮನ್ಸೂರ್ ಆಲಿಖಾನ್ ಮಾಜಿ ಶಾಸಕ ರೋಷನ್ ಬೇಗ್ ಹಾಗೂ ಜಮೀರ್ ಅಹಮದ್ ಖಾನ್ ಹೆಸರು ಪ್ರಸ್ತಾಪಿಸಿದ್ದರು. ಆಸ್ತಿಯೊಂದನ್ನು ಬಹುಕೋಟಿಗೆ ಜಮೀರ್ ಅಹಮದ್ ಖಾನ್ ಐಎಎಂ ಸಂಸ್ಥೆಗೆ ಪರಭಾರೆ ಮಾಡಿದ್ದ ದಾಖಲೆಗಳು ಬೆಳಕಿಗೆ ಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಜಮೀರ್, ನಂದು ಕಾನೂನು ಬದ್ಧ ವಹಿವಾಟು ನಡೆದಿದೆ. ಆಸ್ತಿಯೊಂದರ ಪರಭಾರೆ ನಡೆದಿರುವುದು ನಿಜ. ಆದರೆ ಅದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮತ್ತೊಬ್ಬ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಳಿಕ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಐಎಂಎ ವಂಚನೆ ಪ್ರಕರಣವೇಳ ಜಮೀರ್ ಮೇಲೆ ಇಡಿ ಕಣ್ಣು ಇಟ್ಟಿತ್ತು.
ಮಾತ್ರವಲ್ಲ ಜು. 28, 2019 ರಲ್ಲಿಯೇ ಇಡಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್‌ಗೆ ನೋಟಿಸ್ ನೀಡಿದ್ದರು. ನೋಟಿಸ್ ಪಡೆಯಲು ಜಮೀರ್ ಎರಡು ತಾಸು ಇಡಿ ಅಧಿಕಾರಿಗಳನ್ನು ಕಾಯಿಸಿದ್ದರಂತೆ. ಸ್ಥಳೀಯ ಪೊಲೀಸರು ಬಂದ ಬಳಿಕ ನೋಟಿಸ್ ಪಡೆದಿದ್ದರು. ಎರಡು ಬಾರಿ ಇಡಿ ವಿಚಾರಣೆ ಎದುರಿಸಿದ್ದ ಜಮೀರ್ ಮನೆ ಮೇಲೆ ಇದೀಗ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಜಮೀರ್ ಅವರ ಸಹೋದರ ಹಾಗೂ ಆಪ್ತನನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.
ಶಾಸಕ ಜಮೀರ್ ಅಹ್ಮದ್ ಖಾನ್ ಇತ್ತೀಚೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಮೀರ್ ತಮ್ಮ ಪುತ್ರಿಯ ವಿವಾಹ ಮಹೋತ್ಸವ ನೆರವೇರಿಸಿದ್ದರು.