FACT CHECK | ‘ಸಾವಿನಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ ! ಇದು ರಿಯಲ್ ಚಿತ್ರವೇ?
ವಯನಾಡ್ ನಲ್ಲಿ ನಡೆದ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ತಾಯಿ-ಮಗು ಮಲಗಿರುವ ಜಾಗದಲ್ಲೆ ಮೃತಪಟ್ಟ ಫೋಟೊ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದೆ ಪ್ರತಿಪಾದನೆಯೊಂದಿಗೆ ನ್ಯೂಸ್ ಡೆಸ್ಕ್ ಎಂಬ ಸುದ್ದಿ ವೆಬ್ಸೈಟ್ ಕೂಡ ಹಂಚಿಕೊಂಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಸಂದೇಶದಲ್ಲಿ, “ವಯನಾಡು : ದುರಂತದ ಮುಖ. ಮರಣದ ಸಮಯದಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ! ಮತ್ತೆ ಈಭಾರತ ಭೂಮಿಯಲ್ಲಿ ಹುಟ್ಟಿ ಬನ್ನಿ ಎಂದು ಹಾರೈಸಲು ಮಾತ್ರ ನಮಗೆ ಸಾಧ್ಯ” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಕೆಲವರು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಿಂದ ತಯಾರಿಸಲಾದ ಚಿತ್ರ ಎಂದು ಹೇಳುತ್ತಿದ್ದಾರೆ. ಹಾಗಾಗಿ ಈ ಚಿತ್ರ ವಾಸ್ತವವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹೇಳಿರುವಂತೆ ತಾಯಿ-ಮಗು ಮಲಗಿರುವ ಜಾಗದಲ್ಲೆ ಮೃತಪಟ್ಟ ಫೋಟೊ ಎಂದು ಪ್ರತಿಪಾದಿಸಿ ಹಂಚಿಕೊಂಡ ಫೋಟೊವನ್ನು ಪರಿಶೀಲಿಸಿದಾಗ, ರಿಯಾ 119 ಎಂಬ ಇನ್ ಸ್ಟಾ ಗ್ರಾಂ ಬಳಕೆದಾರರು ಜುಲೈ 1, 2024ರಂದು ಇದನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಇದು ನಿಜವಾಗಿಯೂ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ತಯಾರಿಸಲಾದ ಚಿತ್ರ ಎಂಬ ಮಾಹಿತಿ ಲಭ್ಯವಾಗಿದೆ.
ಎರ್ಮಿಲಿನ್ 229 ಎಂಬ ಫೇಸ್‌ಬುಕ್ ಬಳಕೆದಾರರು 26 ಏಪ್ರಿಲ್ , 2024ರಂದು ಹಂಚಿಕೊಂಡಿದ್ದಾರೆ. “ನೀವು ಯಶಸ್ವಿಯಾಗುವ ದಿನದವರೆಗೆ ದೇವರು ನಿಮ್ಮ ತಾಯಿಯನ್ನು ರಕ್ಷಿಸಲಿ” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ.
ಇದರೊಂದಿಗೆ ನಾವು ಫೋಟೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮಗುವಿನ ಮುಖ ಚಹರೆಯು ಆಫ್ರಿಕನ್ನರ ರೀತಿ ಇರುವುದನ್ನು ಗಮನಿಸಿದ್ದೇವೆ ಮತ್ತು ಚಿತ್ರದ ಮಾದರಿಯು ಒಂದು ರೀತಿ ಕಂಪ್ಯೂಟರೀಕೃತದ ರೀತಿ ಇರುವುದು ಸಂಶಯಕ್ಕೆಡೆಮಾಡಿದೆ.
ಅದರಂತೆ ಚಿತ್ರವನ್ನು ನಾವು ಎಐ ಇಮೇಜ್ ಪರಿಶೀಲಕ ವೆಬ್ ಸೈಟ್ ಗಳಲ್ಲಿ ಪರೀಕ್ಷಿಸಲು ನಿರ್ಧರಿಸಿದ್ದೇವೆ. ಈ ವೇಳೆ ಈಸ್ ಇಟ್ ಎಐ ವೆಬ್ ಇದು ಶೇ.69.94ರಷ್ಟು ಕೃತಕ ಚಿತ್ರ ಎಂದು ಹೇಳಿದೆ.
ಹೈವ್ ಮಾಡರೇಶನ್ ನ ಮೂಲಕವೂ ಫೋಟೋವನ್ನು ಪರಿಶೀಲಿಸಿದ್ದು, ಇದು ಶೇ.99ರಷ್ಟು ಎಐ ಮೂಲಕ ಮಾಡಲಾದ ಕೃತಕ ಫೊಟೋ ಎಂದು ಹೇಳಿದೆ.
ಬಳಿಕ ಸ್ಪೇಸಸ್ ನ ಮೇ ಬೀಸ್ ಆರ್ಟ್ ಡಿಟೆಕ್ಷರ್ ನಲ್ಲೂ ಪರೀಕ್ಷೆ ನಡೆಸಿದ್ದು, ಶೇ.76ರಷ್ಟು ಈ ಚಿತ್ರವು ಕೃತಕ ಚಿತ್ರ ಎಂಬುದನ್ನು ಹೇಳಿದೆ.
ಈ ಎಲ್ಲಾ ಆಧಾರದಲ್ಲಿ ಹೇಳುವುದಾದರೆ, ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ತಾಯಿ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಮನ ಕಲಕುವ ದೃಶ್ಯ ಎಂದು ಎಐ ಮೂಲಕ ಕೃತಕವಾಗಿ ರಚಿಸಲಾದ ಪೋಟೊವನ್ನು ವಯನಾಡಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ನ್ಯೂಸ್ ಚೆಕ್ಕರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ ಹಚ್ಚಲಾಗಿದೆಯೇ? ಈ ಸ್ಟೋರಿ ಓದಿ