ಹಾಕಿ ತಂಡದಲ್ಲಿ ದಲಿತರು ಹೆಚ್ಚು ಇದ್ದದ್ದೇ ಸೋಲಿಗೆ ಕಾರಣ; ಜಾತಿ ನಿಂದನೆಗೆ ತುತ್ತಾದ ಸ್ಟಾರ್ ಆಟಗಾರ್ತಿ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದ ಭಾರತದ ಮಹಿಳಾ ಹಾಕಿ ತಂಡ, ಅರ್ಜೆಂಟಿನಾ ವಿರುದ್ದ ಸೆಮಿಫೈನಲ್ನಲ್ಲಿ ಸೋಲುಂಡಿದೆ. ಈ ಸೋಲಿಗೆ ತಂಡದಲ್ಲಿ ಅತಿ ಹೆಚ್ಚು ಆಟಗಾರ್ತಿಯರು ದಲಿತರೇ ಇದ್ದದ್ದ ಕಾರಣ ಎಂಬ ತಿಳಿಗೇಡಿ ಹೇಳಿದ್ದು, ತಂಡದ ಪ್ರಮುಖ ಆಟಗಾರ್ತಿ ವಂದನಾ ಕಟಾರಿಯಾ ಮನೆ ಮುಂದೆ ದಾಂಧಲೆ ನಡೆಸಿದ್ದಾರೆ.
ವಂದನಾ ಕಟಾರಿಯಾ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲ್ ಸಾಧಿಸಿದ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತೀಯ ಮಹಿಳಾ ತಂಡ ಸೋತ ಕೆಲವೆ ಗಂಟೆಗಲ್ಲಿ ಹರಿದ್ವಾರದ ರೋಷನಾಬಾದ್ ಹಳ್ಳಿಯಲ್ಲಿರುವ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆಯ ಹತ್ತಿರ ಇಬ್ಬರು ಮೇಲ್ಜಾತಿಯ ವ್ಯಕ್ತಿಗಳು ಆಗಮಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್ನಿಂದ ಒಲಿಂಪಿಕ್ಸ್ವರೆಗೆ; ಹಸಿವಿನಲ್ಲೂ ಕನಸು ಕಂಡ ಹಾಕಿ ತಂಡದ ನಾಯಕಿ ರಾಣಿ ರಂಪಾಲ್!
ದುಷ್ಕರ್ಮಿಗಳು ಪಟಾಕಿ ಸಿಡಿಸಿ, ಅಣಕು ಸಂಭ್ರಮಾಚರಣೆ ಮಾಡಿ ನೃತ್ಯ ಮಾಡಿದ್ದು, “ತಂಡದಲ್ಲಿ ಹೆಚ್ಚು ದಲಿತ ಆಟಗಾರರು ಇರುವುದರಿಂದಲೇ ಆಟ ಸೋತಿದೆ” ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ವಂದನಾ ಅವರ ಕುಟುಂಬವು ಆರೋಪಿಸಿದೆ ಎಂದು ಪತ್ರಿಕೆ ತಿಳಿಸಿದೆ.
“ಪಂದ್ಯವು ಸೋತಿದ್ದರ ಬಗ್ಗೆ ನಮಗೆ ಬೇಸರವಿದೆ. ಆದರೆ ತಂಡವು ಹೋರಾಟ ನಡೆಸಿಯೆ ಪಂದ್ಯದಲ್ಲಿ ಸೋತಿದೆ. ಅದರ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ವಂದನಾ ಅವರ ಸಹೋದರ ಶೇಖರ್ ಅವರು ತಿಳಿಸಿದ್ದಾರೆ ಎಂದು TOI ಉಲ್ಲೇಖ ಮಾಡಿದೆ.
“ಪಂದ್ಯ ಸೋತ ದುಃಖದಲ್ಲಿದಾಗ, ಇದ್ದಕ್ಕಿದ್ದಂತೆ ದೊಡ್ಡ ಶಬ್ದಗಳು ಕೇಳಿ ಬಂದವು. ನಮ್ಮ ಮನೆಯ ಹೊರಗೆ ಪಟಾಕಿ ಸಿಡಿಸಲಾಗಿತ್ತು. ನಾವು ಹೊರಗೆ ತೆರಳಿ ನೋಡಿದಾಗ ನಮಗೆ ತಿಳಿದಿರುವ ನಮ್ಮದೆ ಹಳ್ಳಿಯ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಮನೆಯ ಮುಂದೆ ನೃತ್ಯ ಮಾಡುತ್ತಿದ್ದರು” ಎಂದು ಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: 41 ವರ್ಷಗಳ ನಂತರ ಫಲ; ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ!
ಮನೆಯ ಹೊರಗಿನ ಗಲಾಟೆಯನ್ನು ತಡೆಯಲು ವಂದನಾ ಅವರ ಕುಟುಂಬವು ಪ್ರಯತ್ನಿಸಿದಾಗ ಆರೋಪಿಗಳು ಮತ್ತಷ್ಟು ಆಕ್ರೋಶಗೊಂಡು, ಜಾತಿ ನಿಂದನೆ ಮಾಡಿ ಕುಟುಂಬವನ್ನು ಅವಮಾನಿಸಿದ್ದಾರೆ ಎನ್ನಲಾಗಿದೆ.
“ತಂಡದಲ್ಲಿ ಹಲವಾರು ದಲಿತ ಆಟಗಾರರನ್ನು ಸೇರಿಸಿದ್ದರಿಂದಲೇ ಪಂದ್ಯ ಸೋತಿದೆ. ಕೇವಲ ಹಾಕಿ ಮಾತ್ರವಲ್ಲ, ಪ್ರತಿ ಕ್ರೀಡೆಯಲ್ಲೂ ದಲಿತರನ್ನು ಹೊರಗಿಡಬೇಕು ಎಂದು ಅವರು ಹೇಳಿದ್ದಾರೆ. ಇದು ಖಂಡತವಾಗಿಯೂ ಜನಾಂಗೀಯ ನಿಂದನೆಯಾಗಿದೆ” ಎಂದು ಶೇಖರ್ ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ವರದಿ ಹೇಳಿದೆ. ದೂರಿನ ಆಧಾರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. “ನಾವು ದೂರು ಸ್ವೀಕರಿಸಿದ್ದೇವೆ ಮತ್ತು ವಿಚಾರಣೆ ನಡೆಯುತ್ತಿದೆ, ನಂತರ ಪ್ರಕರಣ ದಾಖಲಿಸಲಾಗುವುದು” ಎಂದು ಸಿಡ್ಕಲ್ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆಂದು TOI ವರದಿ ಮಾಡಿದೆ.
ಸೆಮಿ ಫೈನಲ್ನಲ್ಲಿ ಸೋತಿರುವ ಭಾರತದ ಮಹಿಳಾ ಹಾಕಿ ತಂಡ, ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ತಂಡದ ವಿರುದ್ದ ಸೆಣೆಸಾಡಲಿದೆ.

