ಸಿಡಿ ಯುವತಿಗೆ ನಿರಂತರ ಜನಪ್ರತಿನಿಧಿಗಳಿಂದ ಕರೆ: ಸಿಡಿ ಲೇಡಿ ಸಹೋದರ ಹೇಳಿದ್ದೇನು?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಪ್ರತಿನಿತ್ಯ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ಹುಡುಕಾಟದಲ್ಲಿರುವ ಎಸ್ಐಟಿಗೆ ಪ್ರತಿನಿತ್ಯವೂ ರೋಚಕ ವಿಚಾರಗಳು ತಿಳಿದುಬರುತ್ತಿವೆ.
ಸಿಡಿ ಲೇಡಿ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ ಎಸ್ಐಟಿ ಯುವತಿಯ ಸಹೋದರರ ಹೇಳಿಕೆ ಸಂಗ್ರಹಿಸುತ್ತಿದೆ. ಈ ವೇಳೆ ಸಿಡಿ ಯುವತಿಯ ಸಹೋದರರು ಆಶ್ಚರ್ಯಕರ ಮಾಹಿತಿಯೊಂದನ್ನು ನೀಡಿದ್ದಾರೆ. “ಅಕ್ಕನಿಗೆ ಬೇರೆ ಬೇರೆ ರಾಜಕಾರಣಿಗಳಿಂದ ಕರೆಗಳು ಬರುತ್ತಿದ್ದವು. ಆದರೆ ಅವರು ಯಾರು? ಎಲ್ಲಿಯವರು ಎನ್ನುವ ಮಾಹಿತಿ ಮಾತ್ರ ಅಕ್ಕ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ” ಎಂದು ಪೊಲೀಸರ ವಿಚಾರಣೆಯಲ್ಲಿ ಯುವತಿ ಸಹೋದರ ಹೇಳಿಕೊಂಡಿದ್ದಾರೆ.
ಯುವತಿಯ ಬೆಳಗಾವಿ ಮನೆಗೆ ದಿಢೀರ್ ಭೇಟಿ ನೀಡಿದ ಎಸ್ಐಟಿ ಮನೆ ಮಾಲೀಕರು, ಅಕ್ಕಪಕ್ಕದವರು ಹಾಗೂ ಮನೆಯವರನ್ನು ವಿಚಾರಣೆಗೆ ಮುಂದಾಗಿದೆ. ಈ ವೇಳೆ ಯುವತಿ ಸಹೋದರನನ್ನು ತನಿಖೆ ಮಾಡಿದಾಗ ರಾಜಕಾರಣಿಗಳ ವಿಚಾರ ಬಯಲಾಗಿದೆ.
ಆದರೆ ಆ ಜನಪ್ರತಿನಿಧಿಗಳು ಯಾರು? ಅವರಿಗೂ ಯುವತಿಗೂ ಏನ್ ಸಂಬಂಧ? ಅವರು ಯಾಕೆ ಯುವತಿಗೆ ಕರೆ ಮಾಡುತ್ತಿದ್ದರು? ಎನ್ನುವ ವಿಚಾರಗಳು ಇನ್ನಷ್ಟು ಹೊರಬೀಳಬೇಕಿದೆ. ಯುವತಿ ಎಲ್ಲಿದ್ದಾಳೆ ಎನ್ನುವ ಬಗ್ಗೆಯೂ ತೀವ್ರ ಹುಡುಕಾಟ ನಡೆಯುತ್ತಿದೆ. ಒಂದು ವೇಳೆ ಸಹೋದರರು ಹೇಳಿದ್ದು ನಿಜವೇ ಆದರೆ ಪ್ರಕರಣ ಬೇರೆಯದ್ದೇ ತಿರುವು ಪಡೆದುಕೊಳ್ಳಲಿದೆ.

