ಹೆಚ್‌ಡಿಕೆ ಸರ್ಕಾರದ ದೂರವಾಣಿ ಕದ್ದಾಲಿಕೆ ಪ್ರಕರಣ; ವಿಚಾರಣೆಗೆ ಬಿಎಸ್‌ವೈ ನಕಾರ: ಕಾರಣವೇನು?

ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಟೆಲಿಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಲಿ ಸಿಎಂ ಯಡಿಯೂರಪ್ಪ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿದ್ದ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿಯೂ ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದೆ, ಹಿಂದೇಟು ಹಾಕುತ್ತಿದೆ. ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಸರ್ಕಾರದ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದ್ದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಶ್ರೇಣಿಯ ಒಬ್ಬ ಐಪಿಎಸ್‌ ಅಧಿಕಾರಿ ಮತ್ತು ಮೂವರು ರಾಜ್ಯ
ಪೊಲೀಸ್ ಸೇವೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ  ತನಿಖೆಗೆ ನಡೆಸುತ್ತಿರುವ ಸಿಬಿಐ ನವೆಂಬರ್‌ ಅಂತ್ಯ ದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಇದನ್ನೂ ಓದಿ:  ‘ಬೆಂಗಳೂರಿನ ಮೇಲೆ ಈ ಮೂವರದ್ದೇ ಹಿಡಿತ’- ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆ..!

ಪ್ರಸ್ತಾವ ಸಲ್ಲಿಸಿ ಒಂದೂವರೆ ತಿಂಗಳಾದರೂ ಸರ್ಕಾರ ಸಿಬಿಐಗೆ ಅನುಮತಿ ನೀಡಿಲ್ಲ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರಿಂದ ಕಾನೂನು ಸಲಹೆ ಕೋರಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ‘ಐಪಿಎಸ್‌ ಅಧಿಕಾರಿ ಮತ್ತು ಇತರ ಮೂವರು ಪೊಲೀಸ್‌ ಅಧಿಕಾರಿಗಳು ಅಕ್ರಮವಾಗಿ ದೂರವಾಣಿ ಕದ್ದಾಲಿಕೆ ನಡೆಸಿರುವುದು ಸಿಬಿಐ ತನಿಖೆಯಲ್ಲಿ ದೃಢ ಪಟ್ಟಿದೆ. ಅಧಿಕಾರಿಗಳ ಬಳಿಯಲ್ಲೇ ತನಿಖಾ ತಂಡ ಸಾಕ್ಷ್ಯಗಳನ್ನು ಪತ್ತೆಮಾಡಿದೆ. ನಾಲ್ವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಅನುಮತಿ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದು ಗೃಹ ಇಲಾಖೆ, ಮುಖ್ಯಮಂತ್ರಿ ಕಚೇರಿಯವರೆಗೂ ತಲುಪಿತ್ತು. ಕೆಲವು ದಿನಗಳ ಹಿಂದೆ ಅಡ್ವೊಕೇಟ್‌ ಜನರಲ್‌ ಕಚೇರಿಗೆ ರವಾನೆ ಆಗಿದೆ’ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಆದೇಶಿಸಿದ್ದ ಬಿಎಸ್‌ವೈ:

2019ರ ಆಗಸ್ಟ್‌ನಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಕಗೊಂಡಿದ್ದ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮತ್ತು ಇತರ ವ್ಯಕ್ತಿ ಯೊಬ್ಬರ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕು ಕೆಲವು ದಿನಗಳ ಬಳಿಕ ಬಹಿರಂಗಗೊಂಡಿತ್ತು. ಸಿಸಿಬಿ
ಡಿಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ: ಕೃಷಿ ಕಾಯ್ದೆಗೆ ರೈತರು ಅವಕಾಶ ಕೊಡಬೇಕು: ಮೋದಿ ಪರ ಪುಂಗಿ ಊದಿದ ಹೆಚ್‌ಡಿಕೆ!

ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನ ತಾಂತ್ರಿಕ ನೆರವು ಕೇಂದ್ರದ ಅಧಿಕಾರಿಗಳೇ ದೂರವಾಣಿ ಕದ್ದಾಲಿಕೆಯಲ್ಲಿಗಿಯಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಹಿಂದಿನ ಕಮಿಷನರ್‌ ಆಗಿದ್ದ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರ ನಿರ್ದೇಶನದಂತೆ ದೂರವಾಣಿ ಕದ್ದಾಲಿಕೆ ನಡೆಸಿರುವುದಾಗಿ ಕಿರಿಯ ಪೊಲೀಸ್‌ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದರು.

ಪ್ರಭಾವಿ ರಾಜಕಾರಣಿಗಳ ಒತ್ತಡ?

ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡದಂತೆ ರಾಜ್ಯದ ಪ್ರಭಾವಿ ರಾಜಕಾರಣಿಗಳ ಕುಟುಂಬವೊಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದೆ. ಅದಕ್ಕೆ ಮಣಿದಿರುವ ಮುಖ್ಯಮಂತ್ರಿ ಅನುಮತಿ ನಿರಾಕರಣೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಈ ಪ್ರಕರಣದಲ್ಲಿ ಹಿಂದಿನ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಸಚಿವರು, ಶಾಸಕರು, ಪ್ರಭಾವಿ ರಾಜಕಾರಣಿಗಳು ಮತ್ತು ಕೆಲವು ಮಠಾಧೀಶರ ದೂರವಾಣಿ ಗಳನ್ನೂ ಕದ್ದಾಲಿಕೆ ಮಾಡಲಾಗಿದೆ. ಈ ಸಂಗತಿಗಳು ಹೊರಬರದಂತೆ ತಡೆಯಲು ವಿಚಾರಣೆಗೆ ತಡೆ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ರಾಜಕೀಯ ಒತ್ತಡದ ಕಾರಣದಿಂದ ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನಿರಾಕರಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಕಾರಣಕ್ಕಾಗಿಯೇ ಕಡತವನ್ನು ಅಡ್ವೊಕೇಟ್‌ ಜನರಲ್‌ ಕಚೇರಿಗೆ ರವಾನಿಸಲಾಗಿದೆ. ಅವರ ಸಲಹೆ ಆಧರಿಸಿ
ಸಿಬಿಐ ಕೋರಿಕೆಯನ್ನು ತಿರಸ್ಕರಿಸುವ ನಿರ್ಧಾರವನ್ನು ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಂದಾಗಿದ್ದಾರೆ ಎಂಬ ಮಾಹಿತಿ ಸಚಿವಾಲಯದ ಮೂಲಗಳಿಂದ ಹೊರಬಿದ್ದಿದೆ.ಈ ವಿಚಾರದ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಯಾವುದೇ ಪ್ರತಿಕ್ರಿಯೆ ಅಥವಾ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.


ಇದನ್ನೂ ಓದಿ: BJP ಮತ್ತು JDS ವಿಲೀನವಲ್ಲದ ಹೊಂದಾಣಿಕೆ BJPಗೆ ಹೆಚ್ಚು ಲಾಭ: ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights