BJP ವಿರುದ್ಧ ದುರ್ಬಳಕೆ ಆರೋಪ: ಪುದುಚೇರಿ ಚುನಾವಣೆ ಮುಂದೂಡಲು ಸಾಧ್ಯವೇ? ಮದ್ರಾಸ್‌ ಹೈಕೋರ್ಟ್‌ ಪ್ರಶ್ನೆ

ಪುದುಚೇರಿಯಲ್ಲಿ ಬಿಜೆಪಿ ಪಕ್ಷವು ಮತದಾರರ ಆಧಾರ್‌ ಮತ್ತು ದೂರವಾಣಿ ಸಂಖ್ಯೆಗಳನ್ನು ಚುನವಾಣಾ ಪ್ರಚಾರಕ್ಕಾಗಿ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ 06ರಂದು ನಡೆಯಲಿರುವ ಪುದುಚೇರಿ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಸಾಧ್ಯವೇ ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಹೇಳಿದೆ.

“ಪುದುಚೇರಿ ಚುನಾವಣೆಯನ್ನು ಏಕೆ ಮುಂದೂಡಬಾರದು?” ಎಂದು ಪ್ರಶ್ನಿಸಿರುವ ಕೋರ್ಟ್‌, ಮಾರ್ಚ್ 30 ರೊಳಗೆ ತನಿಖೆ ನಡೆಸಿ ಪೂರ್ಣ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯದ ಮುಂದೆ ಸಲ್ಲಿಸಿದ ಮನವಿಯಲ್ಲಿ, ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯಲ್ಲಿ ಬಿಜೆಪಿ – ಎನ್ಆರ್ ಕಾಂಗ್ರೆಸ್ ಮೈತ್ರಿಕೂಟವು ಮತದಾರರಿಗೆ ವಾಟ್ಸಾಪ್‌ ಸಂದೇಶಗಳನ್ನು ಕಳಿಸಿ, ಚುನಾವಣೆಯನ್ನು ಗೆಲ್ಲಲು ಆಧಾರ್‌ ಮತ್ತು ಫೋನ್‌ ನಂಬರ್‌ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರದ ಸಂದೇಶಗಳನ್ನು ಬಿಜೆಪಿ ಕಳಿಸಿದೆ. 950 ಬೂತ್‌ಗಳಲ್ಲಿ ವಾಟ್ಸಾಪ್‌ ಗುಂಪುಗಳನ್ನು ರಚಿಸಿರುವುದು ನಮ್ಮ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಡಿವೈಎಫ್‌ಐ (ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ) ನಾಯಕ ಎ ಆನಂದ್ ದೂರು ನೀಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪುದುಚೇರಿ ಮಾಜಿ ಸಿಎಂ ಎಚ್ಚರಿಕೆ!

“ಇದು ವೈಯಕ್ತಿಕ ಮಾಹಿತಿಯ ಕಳ್ಳತನವಾಗಿದೆ… ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಸೈಬರ್-ಭಯೋತ್ಪಾದನೆ. ಅವರು ಮತದಾರರನ್ನು ಬಿಜೆಪಿಗೆ ಮತ ಚಲಾಯಿಸುವಂತೆ ಕೇಳುತ್ತಾರೆ. ಗೂಗಲ್ ಪೇ ಮತ್ತು ಪೇಟಿಎಂ ಆಧಾರ್‌ಗೆ ಸಂಪರ್ಕ ಹೊಂದಿದ್ದು, ಅವರು ಸುಲಭ ನಗದು ವರ್ಗಾವಣೆಯ ಮೂಲಕ ಮತದಾರರಿಗೆ ಆಮಿಷ-ಲಂಚ ನೀಡಬಹುದು” ಎಂದು ಅವರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಬಿಜೆಪಿ ತನ್ನ ಕಾನೂನು ತಂಡದ ಮೂಲಕ ನ್ಯಾಯಾಲಯದಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಹೇಳಿದೆ.

ವಿಚಾರಣೆ ನಡೆಸಿರುವ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ಅವರ ದ್ವಿಸದಸ್ಯ ಪೀಠವು, ‘ಇದು ಗಂಭೀರವಾದ ವಿಚಾರ” ಎಂದು ಹೇಳಿದೆ. ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಚುನಾವಣಾ ಆರೋಗಕ್ಕೆ ಸೂಚಿಸಿದೆ.

ಪುದುಚೇರಿ 30 ಸದಸ್ಯರ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮೊದಲ ಹಂತದ ಚುನಾವಣೆಗೆ BJP ಹೆವಿವೇಯ್ಟ್‌ ತಯಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights