ಕರ್ನಾಟಕ 03 ಉಪಚುನಾವಣೆ: ಅಖಾಡದಲ್ಲಿ ಸತೀಶ್‌ ಜಾರಕಿಹೊಳಿ; 03 ಪಕ್ಷಗಳ ಅಭ್ಯರ್ಥಿಗಳ ಪಟ್ಟಿ!

ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿವೆ. ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ಮತದಾನ ನಡೆಯಲಿದೆ. ಈ ಚುನಾವಣೆಗಳಿಗೆ ಕಾಂಗ್ರೆಸ್‌-ಬಿಜೆಪಿ-ಜೆಡಿಎಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.

ಬಿಜೆಪಿ ಸಂಸದ ಹಾಗೂ ಕೇಂದ್ರ ರೈಲ್ವೇ ಸಚಿವರಾಗಿದ್ದ ಸುರೇಶ್‌ ಅಂಗಡಿಯವರ ನಿಧನದ ನಂತರ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ, ಬಿಜೆಪಿಯಿಂದ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಕಣಕ್ಕಿಳಿದಿದ್ದಾರೆ. ಲೋಕಸಭೆಯ ಉಪ-ಚುನಾವಣೆಗೆ ಜೆಡಿಎಸ್‌ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆ ಹೇಳಿತ್ತು.

ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಪ್ರತಾಪ್‌ಗೌಡ ಪಾಟೀಲ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇದೀಗ, ಬಿಜೆಪಿ ತೊರೆದು ಕಾಂಗ್ರೆಸ್‌ಸೇರಿರುವ ಬಸನಗೌಡ ತುರುವಿಹಾಳ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಕಳೆದು ಚುನಾವಣೆಯಲ್ಲಿಯೂ ಈ ಇಬ್ಬರೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಇವರ ಪಕ್ಷಗಳು ಅದಲು ಬದಲಾಗಿದ್ದು, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

Read Also:  ಬಂಗಾಳ ಚುನಾವಣೆ: ಮೊದಲ ಹಂತದ ಚುನಾವಣೆಗೆ BJP ಹೆವಿವೇಯ್ಟ್‌ ತಯಾರಿ!

ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಬೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಶರಣು ಸಲಗಾರ್, ಕಾಂಗ್ರೆಸ್‌ನಿಂದ ಮಲ್ಲಮ್ಮ ಮತ್ತು ಜೆಡಿಎಸ್‌ನಿಂದ ಸೈಯದ್ ಅಶ್ರಬ್ ಅಲಿಖಾನ್ ಸ್ಪರ್ಧಿಸಲಿದ್ದಾರೆ.

ಬಸವಕಲ್ಯಾಣ ಹೊರತುಪಡಿಸಿ ಉಳಿದ ಎರಡು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧಿಸುತ್ತಿಲ್ಲ. ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ಇನ್ನು ಉಪಚುನಾವಣೆ ಘೋಷಣೆಯಾಗಿಲ್ಲ.

ಮಾರ್ಚ್ 23ರಂದು ಉಪ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 31ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್‌ 3 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಚುನಾವಣೆ ಘೋಷಣೆ ಆದ ದಿನದಿಂದಲೇ ಮಾದರಿ ನೀತಿಸಂಹಿತೆ ಜಾರಿಯಲ್ಲಿರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೂ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

Read Also: ಅಧಿವೇಶನದಲ್ಲಿ ಅಂಗೀಕಾರಗೊಂಡ ಮಸೂದೆಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights