ನಿಮ್ಮ ಸುಳ್ಳಗಳ ಅಗತ್ಯವಿಲ್ಲ; ಗೋ ಬ್ಯಾಕ್‌ ಸೂಲಿಬೆಲೆ: ಶಿವಮೊಗ್ಗದಲ್ಲಿ ಯುವಜನರ ಪ್ರತಿಭಟನೆ!

ದೇಶಾದ್ಯಂತ ಚರ್ಚೆಯಲ್ಲಿರುವ ‘ಒಂದು ದೇಶ- ಒಂದು ಚುನಾವಣೆ’ ಬಗ್ಗೆ ಶಿವಮೊಗ್ಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆತಿಥಿಯಾಗಿ ಕರೆಯಲಾಗಿತ್ತು. ಈ ವೇಳೆ ಸೂಲಿಬೆಲೆ ಅವರು ಶಿವಮೊಗ್ಗಕ್ಕೆ ಬರುವುದನ್ನು ವಿರೋಧಿಸಿ ಜಿಲ್ಲಾ ನ್ಯಾಷನಲ್ ಸ್ಟೂಡೆಂಟ್ಸ್‌ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯು‌ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನೆಹರು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ನೆಹರು ಕ್ರೀಡಾಂಗಣದ ಬಳಿ ಎನ್‌ಎಸ್‌ಯು‌ಐ ಕಾರ್ಯಕರ್ತರು ಗೋ ಬ್ಯಾಕ್ ಸೂಲಿಬೆಲೆ, ನಿಮ್ಮ ಸುಳ್ಳುಗಳು ನಮಗೆ ಬೇಡ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣದ ವೇಳೆ ಹಲವು ಸುಳ್ಳುಗಳನ್ನು ಹೇಳಿ, ಯುವ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಅವರ ಭಾಷಣಕ್ಕೆ ಅವಕಾಶ ನೀಡಬಾರದು ಎಂದು ಕಾರ್ಯಕರ್ತರು ಆಗ್ರಹಿಸಿದರು.

ನೆಹರು ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಇಲಾಖೆ ತಿಳಿಸಿತ್ತು. ಇತ್ತೀಚೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಬೇಕಿದ್ದ ರೈತ ಪಂಚಾಯಿತಿಗೆ ಅವಕಾಶ ನೀಡಿರಲಿಲ್ಲ, ಆದರೆ ಒಂದು ರಾಷ್ಟ್ರ ಒಂದು ಕಾನೂನು ಕಾರ್ಯಕ್ರಮಕ್ಕೆ ಕ್ರೀಂಡಾಗಣವನ್ನು ಹೇಗೆ ನೀಡಲಾಗಿದೆ ಎಂದು ಸಂಘಟನೆ ಪ್ರಶ್ನಿಸಿದೆ.

ಇದನ್ನೂ ಓದಿ: ಬಸವಕಲ್ಯಾಣದಲ್ಲಿ ಮುಸ್ಲೀಂ ಅಭ್ಯರ್ಥಿ‌: ಮುಸ್ಲಿಂ ರಕ್ಷಕ ಯಾರೆಂದು JDS-ಕಾಂಗ್ರೆಸ್‌ ಜಟಾಪಟಿ!

ಮಾ.27 ಕ್ಕೆ ನರೇಂದ್ರ ಮೋದಿ ವಿಚಾರ ಮಂಚ್‌ನಿಂದ ಆಯೋಜಿಸಿರುವ ರಾಜಕೀಯ ಪ್ರೇರಿತ ಭಾಷಣದ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಚಕ್ರವರ್ತಿ ಸೂಲಿಬೆಲೆ ಅವರ ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದು ಖಂಡನೀಯ ಎಂದು ಸಂಘಟನೆ ಆರೋಪಿಸಿದೆ.

“ಸೂಲಿಬೆಲೆ ಅವರು ಭಾಷಣದಲ್ಲಿ ಸುಳ್ಳುಗಳನ್ನು ಹೇಳುವ ಮೂಲಕ ಯುವಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡಿಸೇಲ್ ದರ ಕಡಿಮೆ ಆಗುತ್ತದೆ. ಯುವಜನರಿಗೆ ಉದ್ಯೋಗ ಸಿಗುತ್ತದೆ. ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದೆಲ್ಲಾ ಸುಳ್ಳು ಹೇಳಿಕೆಗಳನ್ನು ಹಿಂದಿನ ಭಾಷಣಗಳಲ್ಲಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಯುವಜನರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇಂತಹ ಸುಳ್ಳು ಭಾಷಣ ಮಾಡುವವರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಸಂಘಟನೆ ಒತ್ತಾಯಿಸಿದೆ.

ನೆಹರು ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಎನ್‌ಎಸ್‌ಯು‌ಐ ಮುಖಂಡರಾದ ಚೇತನ್ ಗೌಡ, ಬಾಲಾಜಿ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ವಿಜಯಪುರ: ಹೊಲಕ್ಕೆ ಹೋದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights