ರಾಜ್ಯ ಉಪಚುನಾವಣೆ: 03 ಕ್ಷೇತ್ರಗಳಲ್ಲಿ 30 ಮಂದಿ ಅಭ್ಯರ್ಥಿಗಳು ಸ್ಪರ್ಧೆ!

ರಾಜ್ಯದಲ್ಲಿ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಭಾರೀ ಕಸರತ್ತು ನಡೆಸುತ್ತಿವೆ. ಜೆಡಿಎಸ್‌ ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಪಕ್ಷಗಳ ಅಭ್ಯರ್ಥಿಗಳಲ್ಲದೆ 14 ಮಂದಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿಯವರು ಸಾವನ್ನಪ್ಪಿದ್ದರಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಕ್ಕೆ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಖಾಡದಲ್ಲಿದ್ದಾರೆ. ಇವರಲ್ಲದೆ, ಇನ್ನೂ 16 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 08 ಮಂದಿ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದು, ಇದೀಗ 10 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿದ್ದ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಸೇರಿದಂತೆ ಒಟ್ಟು 10 ಮಂದಿಯ ಪೈಕಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಸಿದ್ದಲಿಂಗಪ್ಪ ಮತ್ತು ಚಕ್ರವರ್ತಿ ನಾಯಕ್ ನಾಮಪತ್ರ ಹಿಂಪಡೆದಿದ್ದು, 8 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ನಿಧನದಿಂದ ತೆರವಾಗಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಮಾಲಾ ನಾರಾಯಣರಾವ್, ಬಿಜೆಪಿಯ ಶರಣ ಬಸಪ್ಪ ಸಲಗಾರ ಹಾಗೂ ಜೆಡಿಎಸ್‍ನ ಸೈಯದ್ ಯಸ್ರಬ್ ಅಲಿ ಖಾದ್ರಿ ಸೇರಿದಂತೆ 14 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಮುಳೆ ಮಾರುತಿ ರಾವ ಗೋವಿಂದರಾವ್ ಹಾಗೂ ಈರಣ್ಣಾ ಚಂದ್ರಶೇಖರ್ ಹಡಪದ ನಾಮಪತ್ರ ಹಿಂಪಡೆದಿದ್ದು, 12 ಮಂದಿ ಅಂತಿಮ ಅಖಾಡದಲ್ಲಿದ್ದಾರೆ.

ಮೂರು ಕ್ಷೇತ್ರಗಳಗೆ ಏಪ್ರಿಲ್‌ 17 ರಂದು ಮತದಾನ ನಡೆಯಲಿದೆ. ಮೇ 02 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ಮುಂದಿನ ಸಿಎಂ ಸಿದ್ದು, ಹೊಸ ಆಸ್ಪತ್ರೆಗಳು: ವೈರಲ್‌ ಆಗುತ್ತಿವೆ ಬಾಳೆಹಣ್ಣಿನ ಮೇಲೆ ವಿಭಿನ್ನ ಪ್ರಾರ್ಥನೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights