ರೈಲು ನಿಲ್ದಾಣದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಟಿಟಿಇ ಅಮಾನತು!
ಉತ್ತರ ಪ್ರದೇಶ ಬರೇಲಿ ಜಂಕ್ಷನ್ ರೈಲು ನಿಲ್ದಾಣದಲ್ಲಿ 23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟಿಕೆಟ್ ಪರೀಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಲಕ್ನೋಗೆ ಪ್ರಯಾಣಿಸಲು ಶ್ರಮಜೀವಿ ಕೋವಿಡ್ -19 ವಿಶೇಷ ರೈಲುಗಾಗಿ ಯುವತಿ ಕಾಯುತ್ತಿದ್ದರು. ಈ ವೇಳೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ತಮಗೆ ಟಿಟಿಇ ಕಿರುಕುಳ ನೀಡಿದ್ದಾರೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.
ಲಕ್ನೋದ ಚಾರ್ಬಾಗ್ನ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ನಿಲ್ದಾಣದಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಟಿಕೆಟ್ ಪರೀಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ತಾನು ಪ್ರಯಾಣಿಸಬೇಕಿದ್ದ ರೈಲಿನ ಸಮಯಕ್ಕಿಂತ ಮುಂಚಿತವಾಗಿ ನಿಲ್ದಾಣವನ್ನು ತಲುಪಿದೆ. ಈ ವೇಳೆ ಟಿಟಿಇ ರವಿ ಮೀನಾ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು. ಆತ ತನ್ನ ಕೈಯನ್ನು ಹಿಡಿದು, ಅಶ್ಲೀಲ ಸನ್ನೆಗಳನ್ನು ಮಾಡಿದನು. ತನ್ನನ್ನು ಹಿಂಬಾಲಿಸುವಂತೆ ಹೇಳಿದನು ಎಂದು ಯುವತಿ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಟಿಟಿಇ ತನ್ನ ಕೈಯನ್ನು “ಹಲವಾರು ಬಾರಿ” ಬಿಗಿಯಾಗಿ ಹಿಡಿದಿದ್ದ. ತಾವು ಮಹಿಳಾ ಸಿಬ್ಬಂದಿಗೆ ದೂರು ನೀಡಿದಾಗ, ಆತ ತನ್ನನ್ನು ತಳಿದನು ಎಂದು ಆಕೆ ವಿವರಿಸಿದ್ದಾರೆ.
ರೈಲು ಹತ್ತಿದ ನಂತರ, ಅವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ನಂತರ ಲಕ್ನೋ ಚಾರ್ಬಾಗ್ ರೈಲ್ವೆ ನಿಲ್ದಾಣವನ್ನು ತಲುಪಿದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರವನ್ನು ಪಡೆದುಕೊಂಡ ನಂತರ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ರೇಖಾ ಶರ್ಮಾ ಟಿಟಿಇಯನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ತನಿಖೆಯನ್ನು ಬರೇಲಿ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಧಿಕಾರವಿದ್ದರೂ ನಿಲ್ಲದ ಶೋಷಣೆ; ಪಂಚಾಯತ್ ದಲಿತ ಅಧ್ಯಕ್ಷರ ಮೇಲೆ ನಡೆಯುತ್ತಿವೆ ನಿರಂತರ ದೌರ್ಜನ್ಯಗಳು!

