ಬಸವ ಕಲ್ಯಾಣದಲ್ಲಿ ಚತುಷ್ಕೋನ ಸ್ಪರ್ಧೆ: 25 ವರ್ಷಗಳ JDS ಭದ್ರಕೋಟೆಯಲ್ಲಿ ಯಾರಿಗೆ ಜಯ?

ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ತೀವ್ರಗೊಂಡಿದೆ. ಚುನಾವಣಾ ಕಣದಲ್ಲಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮುಖ್ಯವಾಗಿ ನಾಲ್ಕು ಅಭ್ಯರ್ಥಿಗಳ ನಡುವೆ ಹೋರಾಟ ನಡೆಯಲಿದೆ. ಈ ಚತುಷ್ಕೋನ  ಹಣಾಹಣಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಹಾಗೂ ಬಿಜೆಪಿ ವಿರುದ್ದ ಬಂಡಾಯ ಎದ್ದಿರುವ ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಡುವೆ ಭಾರೀ ಪೈಪೋಟಿ ನಡೆಯಲಿದೆ ಎಂದು ಹೇಳಲಾಗಿದೆ.

ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಭಾರೀ ಪ್ರಯತ್ನದಲ್ಲಿ ತೊಡಗಿದೆ. ಅಂತೆಯೇ, ಬಸವಕಲ್ಯಾಣದಲ್ಲಿ ಖಾತೆ ತೆರೆಯಲು ಯತ್ನಿಸಿಸುತ್ತಿರುವ ಆಡಳಿತಾರೂಢ ಬಿಜೆಪಿ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಆತೊರೆಯುತ್ತಿದೆ. ಇನ್ನೊಂದು 1989 ಮತ್ತು 2013ರ ವರೆಗೆ ಎಲ್ಲಾ ಚುನಾವಣೆಗಳಲ್ಲೂ ಗೆದ್ದು ತನ್ನ ಬಲಾಢ್ಯ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಜೆಡಿಎಸ್‌, ಈ ಕ್ಷೇತ್ರವನ್ನು ಮರಳಿಪಡೆಯಲೇಬೇಕು ಎಂದು ಪರಿತಪಿಸುತ್ತಿದೆ. ಮೊತ್ತೊಂದೆಡೆ ಜೆಡಿಎಸ್‌ ತೊರೆದು ಬಿಜೆಪಿ ಸೇರಿ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಮಲ್ಲಿಕಾರ್ಜುನ ಖೂಬಾ ಈ ಬಾರಿ ಬಿಜೆಪಿ ಟಿಕೆಟ್‌ ನೀಡದ ಕಾರಣ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹಠಕ್ಕೆ ಬಿದ್ದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಸವ ಕಲ್ಯಾಣ ಕ್ಷೇತ್ರವು ನಾಲ್ಕು ಕೋನಗಳ ಚುನಾವಣೆಯಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್‌ನಿಂದ ದಿವಂಗತ ಬಿ. ನಾರಾಯಣ ರಾವ್ ಅವರ ಪತ್ನಿ ಮಾಲಾ ಅವರು ಕಣದಲ್ಲಿದ್ದರೆ, ಬಿಜೆಪಿಯಿಂದ ಶರಣು ಸಲಗಾರ್‌, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಹಾಗೂ ಪಕ್ಷೇತರ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಕಣದಲ್ಲಿದ್ದಾರೆ.

62,000 ಲಿಂಗಾಯತ ಮತಗಳಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಶರಣು ಅವರನ್ನು ಕಣಕ್ಕಿಳಿಸಿದೆ. ಆದರೆ, ಶರಣು ಹಾಗೂ ಮಲ್ಲಿಕಾರ್ಜುನ ಖೂಬಾ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಗೆ ಲಿಂಗಾಯತರ ಮತ ವಿಭಜನೆಯ ಆತಂಕ ಎದುರಾಗಿದೆ.

ಅಲ್ಲದೆ, ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಸಂಖ್ಯೆ ಹೆಚ್ಚಿನ ಪಾಲು (36,000) ಹೊಂದಿದೆ. ಇದೂವರೆಗೂ ಬಿ.ನಾರಾಯಣರಾವ್ ಮುಸ್ಲಿಮರಿಗೆ ಆಪ್ತರಾಗಿದ್ದರು. ಅವರ ನಿಧನದಿಂದಾಗಿ ಮುಸ್ಲಿಂ ಮತಗಳನ್ನೂ ಸೆಳೆಯಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. 15 ವರ್ಷ ಕಾಂಗ್ರೆಸ್‌ನಲ್ಲಿದ್ದ ಲಾರಿ ಉದ್ಯಮಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಜೆಡಿಎಸ್‌ ಕರೆತಂದು ಕಣಕ್ಕಿಳಿಸಿದೆ.  ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಮತಗಳ ಕ್ರೋಡೀಕರಣಕ್ಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಮುಸ್ಲಿಮರು ಯಾರ ಪರವಾಗಿ ನಿಲ್ಲುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ನಿರ್ಧಾರವಾಗಲಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್‌-ಬಿಜೆಪಿ ನೆಕ್‌ ಟು ನೆಕ್‌ ಫೈಟ್‌: ಗೆಲ್ಲುತ್ತಾ BJP?

ಮಾಜಿ ಶಾಸಕ, ಮರಾಠ ಸಮುದಾಯದ 40,000 ಮತಗಳೂ ಈ ಕ್ಷೇತ್ರದಲ್ಲಿವೆ. ಮರಾಠ ಸಮುದಾಯದ ಮುಖಂಡ ಮಾರುತಿರಾವ್‌ ಮುಳೆ ಕಳೆದ ಬಾರಿ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿದ್ದರು. ಈಗ ಎನ್‌ಸಿಪಿ ಸೇರಿ ನಾಮಪತ್ರ ಸಲ್ಲಿಸಿದ್ದ ಅವರನ್ನು ಬಿಜೆಪಿ ಸೆಳೆದುಕೊಂಡಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಿ.ಜಿ.ಆರ್. ಸಿಂಧ್ಯಾ ಕಾಂಗ್ರೆಸ್ ಸೇರಿದ್ದಾರೆ. ಮರಾಠ ಸಮುದಾಯದ ಮತ ಸೆಳೆಯಲು ಬಿಜೆಪಿ-ಕಾಂಗ್ರೆಸ್‌ ಪೈಪೋಟಿ ನಡೆಸುತ್ತಿವೆ.

ಈ ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಮುಸ್ಲಿಂ ಮತದಾರರು ಹೆಚ್ಚೂ-ಕಡಿಮೆ ಸಮ ಸಂಖ್ಯೆಯಲ್ಲಿದ್ದಾರೆ. ಇದಲ್ಲದೆ, ಎಸ್‌ಸಿ-ಎಸ್‌ಟಿ ಮತಗಳೂ 30,000 ವಿದ್ದರೆ, ಕುರುಬ ಮತಗಳೂ 31,000 ಇವೆ. ಹೀಗಾಗಿ ಈ ಎಲ್ಲಾ ಸಮುದಾಯಗಳನ್ನೂ ಓಲೈಸಿಕೊಳ್ಳಲು ಮೂರೂ ಪಕ್ಷಗಳು ಕಸರತ್ತು ನಡೆಸಿವೆ.

ಜನಾಭಿಪ್ರಾಯದ ಪ್ರಕಾರ ಈ ಉಪ ಚುನಾವಣೆಯು ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಡುವಿನ ಸ್ಪರ್ಧೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ‘ಸಹಾನುಭೂತಿ’ ಒಂದು ಹಂತಕ್ಕೆ ಒಲಿಯುವ ಸಾಧ್ಯತೆಯೂ ದಟ್ಟವಾಗಿದೆ. ಮಾಲಾ ಅವರಿಗೆ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಇಲ್ಲದೆ ಇದ್ದರೂ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ಪ್ರಚಾರ ಹಾಗೂ ತಂತ್ರಗಾರಿಗೆ ಕೈಹಿಡಿಯುತ್ತದೆ ಎಂದು ಹೇಳಲಾಗಿದೆ.

ಮತ್ತೊಂದು ಕಡೆಯಲ್ಲಿ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಇದು ಮತ ವಿಭಜನೆಗೂ ಅವಕಾಶ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಮತಗಳನ್ನು ಕ್ರೊಡೀಕರಿಸಲು ಸ್ವತಃ ಜಮೀರ್ ಅಹ್ಮದ್ ಖಾನ್ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಸ್ವತಃ ಸಿಎಂ ಬಿಎಸ್‌ ಯಡಿಯೂರಪ್ಪ ಬಸವಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಬೀಡುಬಿಟ್ಟು ಮತಬೇಟೆಯಲ್ಲಿ ತೊಡಗಿದ್ದಾರೆ. ಮರಾಠ, ಲಿಂಗಾಯತ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಗೆ  ಮಲ್ಲಿಕಾರ್ಜುನ ಖೂಬಾ ಮುಳುವಾಗಿದ್ದಾರೆ. ಬಿಜೆಪಿ ಪರವಾದ ಮತಗಳು ಹಾಗೂ ಲಿಂಗಾಯತ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಶರಣು ಸಲಗಾ ಅವರು ಹೊರಗಿನ ಬಂದವರು ಎಂಬ ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ. ಪರಿಣಾಮ ಬಿಜೆಪಿ ಮತಗಳ ವಿಭಜನೆ ಆದರೆ ಇದು ಕಮಲ ಅಭ್ಯರ್ಥಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಮಲ್ಲಿಕಾರ್ಜುನ ಖೂಬಾ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂಬುವುದೇ ಬಹುತೇಕ ಮಂದಿಯ ಅಭಿಪ್ರಾಯವಾಗಿದೆ. ಏಪ್ರಿಲ್ 17 ರಂದು ಮತದಾನ ನಡೆಯಲಿದ್ದು ಬಸವಕಲ್ಯಾಣದ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಮಸ್ಕಿ: ಕಾಂಗ್ರೆಸ್‌-BJP ಅದಲಿ-ಬದಲಿ ಅಭ್ಯರ್ಥಿಗಳ ಹಣಾಹಣಿ; ಮತ್ತೆ ಗೆಲ್ತಾರಾ ಹ್ಯಾಟ್ರಿಕ್‌ ಬಾರಿಸಿದ್ದ ಪ್ರತಾಪಗೌಡ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights