ಮಸ್ಕಿ: ಕಾಂಗ್ರೆಸ್‌-BJP ಅದಲಿ-ಬದಲಿ ಅಭ್ಯರ್ಥಿಗಳ ಹಣಾಹಣಿ; ಮತ್ತೆ ಗೆಲ್ತಾರಾ ಹ್ಯಾಟ್ರಿಕ್‌ ಬಾರಿಸಿದ್ದ ಪ್ರತಾಪಗೌಡ?

ರಾಜ್ಯದ ಮೂರು ಉಪಚುನಾವಣೆಗಳು ಒಂದೊಂದು ವಿಶೇಷತೆಗಳಿಂದ ಗಮನ ಸೆಳೆಯುತ್ತಿವೆ. ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ-ಸಮರದಲ್ಲಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್‌-ಬಿಜೆಪಿ ಜಿದ್ದಿಗೆ ಬಿದ್ದಿವೆ. ಈ ಮಧ್ಯೆ ಮಸ್ಕಿ ಕ್ಷೇತ್ರವು ವಿವಿಧ ಆಯಾಮಗಳಲ್ಲಿ ರಾಜ್ಯದ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.

2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಮಸ್ಕಿ. 2008ರಿಂದ ಮೂರು ಬಾರಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮೂರೂ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್‌ ಗೆಲುವು ಸಾಧಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಪ್ರತಾಪಗೌಡ, ಉಳಿದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು.

ಇದೀಗ, ಮತ್ತೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಈಗ ನಡೆಯುತ್ತಿರುವ ನಾಲ್ಕನೇ ಚುನಾವಣೆ (ಉಪಚುನಾವಣೆ)ಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ತಮ್ಮ ಗೆಲುವು ಸುಲಭ ಎಂದು ಅವರು ಭಾವಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉಪಚುನಾವಣೆ: ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆಲುಗು ಗಾಯಕಿ ಮಂಗ್ಲಿ!

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಸಮರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಮೂರು ಅವಧಿಯಲ್ಲಿಯೂ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್‌ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಅನುಷ್ಠಾನಗೊಳ್ಳಬೇಕಾದ ನೀರಾವರಿ ಯೋಜನೆಗಳು, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಭತ್ತದ ಬೆಳೆಗೆ ಸಮರ್ಪಕ ಕಾಲುವೆ ನೀರು ಒದಗಿಸುವಂತಹ ಅಭಿವೃದ್ಧಿ ವಿಷಯಗಳ ಜತೆಗೆ ‘ಸ್ವಾಭಿಮಾನ’ ಮತ್ತು ‘ಪಕ್ಷಾಂತರ’ ವಿಷಯಗಳೂ ಮುನ್ನಲೆಯಲ್ಲಿ ಚರ್ಚೆಯಾಗುತ್ತಿವೆ.

‘ಆಪರೇಷನ್‌ ಕಮಲ’ದ ಭಾಗವಾಗಿ 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ ಪ್ರತಾಪಗೌಡರ ವಿರುದ್ದ ಕಾಂಗ್ರೆಸ್‌ ಪಕ್ಷಾಂತರ ಮತ್ತು ಸ್ವಾಭಿಮಾನದ ಅಸ್ತ್ರವನ್ನು ಪ್ರಯೋಗಿಸುತ್ತಿದೆ.

ಅಲ್ಲದೆ, ಕಳೆದ ಚುನಾವಣೆ(2018)ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಸೋಲುಂಡಿದ್ದ ಬಸನಗೌಡ ತುರ್ವಿಹಾಳ ಅವರನ್ನು ಪಕ್ಷಕ್ಕೆ ಕರೆತಂದಿರುವ ಕಾಂಗ್ರೆಸ್‌ ತಮ್ಮ ಮಾಜಿ ಶಾಸಕನ ವಿರುದ್ದ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಪರಸ್ಪರ ಸೆಣೆಸಾಡಿದ್ದ ಪ್ರತಾಪಗೌಡ ಮತ್ತು ಬಸನಗೌಡ ಇದೀಗ ಮತ್ತೆ ಕಣದಲ್ಲಿ ಹಣಾಹಣಿ ನಡೆಸುತ್ತಿದ್ದಾರೆ. ಆದರೆ, ಅವರು ಪ್ರತಿನಿಧಿಸುತ್ತಿದ್ದ ಪಕ್ಷಗಳು ಅದಲು-ಬದಲಾಗಿವೆಯಷ್ಟೇ.

ಬಸನಗೌಡ ಕೂಡ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆ ನಂತರ ಬಿಜೆಪಿ ಸೇರಿ 2018ರ ಚುನಾವಣೆಯಲ್ಲಿ ಎಂಎಲ್‌ಎ ಅಭ್ಯರ್ಥಿಯಾಗಿದ್ದರು, ಇದೀಗ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.

ಇದನ್ನೂ ಓದಿ: ವಿಡಿಯೋ: ಮಸ್ಕಿಯಲ್ಲಿ BJP ಎರಡು ಚೀಲ ಹಣ ಸಾಗಾಟ; ಆಯೋಗಕ್ಕೆ ಕಾಂಗ್ರೆಸ್‌ ದೂರು!

ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದರಿಂದ ಈ ಬಾರಿಯೂ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಕೈನಾಯಕರು ವಿಶ್ವಾಸದಲ್ಲಿದ್ದಾರೆ. ಅಂತೆಯೇ ಕಳೆದ ಮೂರು ಚುನಾವಣೆಯಲ್ಲಿ ಪ್ರತಾಪ್‌ಗೌಡ ಪಾಟೀಲ್‌ ಗೆದ್ದಿರುವುದರಿಂದ ಪಕ್ಷಕ್ಕಿಂತಲೂ ಮಿಗಿಲಾಗಿ ಪ್ರತಾಪ್‌ಗೌಡರೇ ಗೆಲ್ಲುತ್ತಾರೆ ಎಂದು ಭರವಸೆಯಲ್ಲಿ ಬಿಜೆಪಿ ಇದೆ. ಹೀಗಾಗಿ ಮಸ್ಕಿ ಜನರು ಉಪ ಚುನಾವಣೆಯಲ್ಲಿ ಪಕ್ಷಾಂತರವನ್ನೂ ಹಾಗೂ ಮುರೂ ಚುನಾವಣೆಯಲ್ಲಿ ಗೆದ್ದರುವ ಪ್ರತಾಪ್‌ಗೌಡರನ್ನು ತಿರಸ್ಕರಿಸುವರೇ ಅಥವಾ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸುವರೇ ಎಂಬುದು ಕುತೂಹಲ ಕೆರಳಿಸಿದೆ

ಮಸ್ಕಿಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಇಲ್ಲಿಯ ಚುನಾವಣೆಯ ಉಸ್ತುವಾರಿಕೆಯನ್ನು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರಗೆ ನೀಡಿದೆ. ಇತ್ತ ಕಾಂಗ್ರೆಸ್‌ ಕೂಡ ಭಾರೀ ತಯಾರಿ ನಡೆಸುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರನ್ನು ಕ್ಷೇತ್ರದಲ್ಲಿ ಬಿಡಾಯ ಹೂಡಿಸಿದೆ, ಜಿಲ್ಲೆಯ ವಿವಿಧ ನಾಯಕರುಗಳನ್ನು ಮಸ್ಕಿಯಲ್ಲಿ ನೇಮಿಸಿದ್ದು, ಗ್ರೌಂಡ್‌ ಲೆವೆಲ್‌ ಕಸರತ್ತು ನಡೆಸುತ್ತಿದೆ.

ಈ ನಡುವೆ ಬಿಜೆಪಿಗರು ಜನರಿಗೆ ಹಣ ಹಂಚುತ್ತಿದ್ದಾರೆ ಎಂದು ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಸನ ಮೂಲದ ಮೂರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಬಿಜೆಪಿ ವಿರುದ್ದ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಅದಲಿ-ಬದಲಿ ಅಭ್ಯರ್ಥಿಗಳು ಕಣದಲ್ಲಿರುವ ಮಸ್ಕಿ ಕ್ಷೇತ್ರವು ಯಾರಿಗೆ ಒಲಿಯಲಿದೆ ಎಂದು ಮೇ 2 ರಂದು ತಿಳಿಯಲಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್‌-ಬಿಜೆಪಿ ನೆಕ್‌ ಟು ನೆಕ್‌ ಫೈಟ್‌: ಗೆಲ್ಲುತ್ತಾ BJP?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights