ಕೊರೊನಾದಿಂದ ಬಂಗಾಳದಲ್ಲಿ ಎಲ್ಲಾ ರ್ಯಾಲಿಗಳನ್ನೂ ಮಾಡಿದ ರಾಹುಲ್ಗಾಂಧಿ; ಇತರ ಪಕ್ಷಗಳಿಗೂ ಮನವಿ!
ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ದೇಶ ಮತ್ತೆ ತತ್ತರಿಸುವಂತಹ ಸ್ಥಿತಿಗೆ ತಲುಪುತ್ತಿದೆ. ಈ ಮಧ್ಯೆಯೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದ್ದು, ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಕೊರೊನಾ ನಡುವೆಯೂ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿವೆ. ಆದರೆ, ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಬಂಗಾಳದಲ್ಲಿ ತಮ್ಮ ಎಲ್ಲಾ ರ್ಯಾಲಿಗಳನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಇತರ ಪಕ್ಷಗಳೂ ಚುನಾವಣಾ ರ್ಯಾಲಿಗಳನ್ನು ರದ್ದುಮಾಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಕೊರೊನಾ ಹರಡುತ್ತಿರುವ ಈ ಆತಂಕಕಾರಿ ಪರಿಸ್ಥಿತಿಯಲ್ಲಿ ನಾನು ನನ್ನ ಎಲ್ಲಾ ರ್ಯಾಲಿಗಳನ್ನು ರದ್ದುಮಾಡಿದ್ದೇನೆ. ಅಲ್ಲದೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಗಳನ್ನು ನಡೆಸಬೇಕೆ ಎಂಬುದರ ಕುರಿತು ಇತರ ಪಕ್ಷಗಳ ರಾಜಕೀಯ ನಾಯಕರು ಯೋಚಿಸಬೇಕೆಂದು ಸಲಹೆ ನೀಡುತ್ತೇನೆ” ಎಂದು ರಾಹುಲ್ ತಿಳಿಸಿದ್ದಾರೆ.
In view of the Covid situation, I am suspending all my public rallies in West Bengal.
I would advise all political leaders to think deeply about the consequences of holding large public rallies under the current circumstances.
— Rahul Gandhi (@RahulGandhi) April 18, 2021
ಪಶ್ಚಿಮ ಬಂಗಾಳದಲ್ಲಿ ನಿನ್ನೆ 5ನೇ ಹಂತದ ಮತದಾನ ಮುಗಿದಿದ್ದು ಇನ್ನೂ ಮೂರು ಹಂತದ ಚುನಾವಣೆ ಬಾಕಿ ಇದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಲವಾರು ಕಡೆ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.
ಹೆಚ್ಚುತ್ತಿರುವ ಕೋವಿಡ್ ಕಾರಣಕ್ಕೆ ಬಂಗಾಳ ಕೊನೆಯ ನಾಲ್ಕು ಹಂತದ ಚುನಾವಣೆಯನ್ನು ಒಂದೇ ಹಂತದಲ್ಲಿ ಮಾಡುವಂತೆ ಟಿಎಂಸಿ ಚುನಾವಣಾ ಆಯೋಗವನ್ನು ಕೋರಿತ್ತು. ಆದರೆ ಚುನಾವಣಾ ಆಯೋಗ ಆ ಬೇಡಿಕೆಯನ್ನು ನಿರಾಕರಿಸಿದೆ.
ಬಂಗಾಳದಲ್ಲಿ ಶನಿವಾರ ಅತಿ ಹೆಚ್ಚು 7,713 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 6,51,508 ಕ್ಕೆ ಏರಿಕೆಯಾಗಿದೆ. ಅಲ್ಲದೆ, ನಿನ್ನೆ 34 ಜನರು ಕೊರೊನಾದಿಂದ ಸಾವನ್ನಪ್ಪಿದ್ದು, ಸಾವುಗಳ ಸಂಖ್ಯೆ 10,540 ಕ್ಕೆ ಏರಿದೆ.
ಇದನ್ನೂ ಓದಿ: ಅಸ್ಸಾಂ: BJP ಆಪರೇಷನ್ ಕಮಲ – ಕೊರೊನಾ ಭಯ: ರಾಜಸ್ಥಾನದಲ್ಲಿದ್ದ ಎಐಯುಡಿಎಫ್ ಅಭ್ಯರ್ಥಿಗಳು ಅಸ್ಸಾಂಗೆ ವಾಪಸ್!

