ಶುಭ ಸಮಾರಂಭಗಳ ಬದಲು ಅಂತ್ಯಸಂಸ್ಕಾರದ ವಸ್ತುಗಳ ಮಾರಾಟಕ್ಕೆ ಮಾರ್ಪಾಟ್ಟ ಅಂಗಡಿಗಳು…!

ಕೊರೊನಾ ತಂದ ಕಂಟಕದಿಂದಾಗಿ ಮದುವೆ ಸಮಾರಂಭಗಳ ಬದಲು ಅಂತ್ಯಸಂಸ್ಕಾರದ ವಸ್ತುಗಳ ಮಾರಾಟಕ್ಕೆ ಉತ್ತರ ಪ್ರದೇಶದ ಅಂಗಡಿಗಳು ಮಾರ್ಪಾಡಾಗಿವೆ.

ಹೌದು… ಎಗ್ಗಿಲ್ಲದೆ ನುಗ್ಗುತ್ತಿರುವ ಕೊರೊನಾ ತಡೆಗೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕೊರೊನಾ ಮಾತ್ರ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೀಗಾಗಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ಫ್ಯೂ ಜಾರಿಗೆ ತರಲಾಗಿದ್ದು ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೊರೊನಾ ಹೆಚ್ಚಾದಂತೆಲ್ಲಾ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಕಳೆದ ವರ್ಷದಂತೆ ಈ ವರ್ಷವೂ ಮದುವೆ ಸಮಾರಂಭಗಳು ನಿಂತು ಹೋದರೆ ಇದನ್ನೇ ನಂಬಿಕೊಂಡು ಜೀವನ ಸಾಗಿಸುವವರು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುತ್ತಾರೆ.

ಹೀಗಾಗಿ ಇಷ್ಟು ದಿನ ಮದುವೆ ಸಮಾರಂಭಗಳಿಗಾಗಿ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅದೆಷ್ಟೋ ಅಂಗಡಿಗಳು ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ. ಇದನ್ನು ನೋಡಿದರೆ ಈ ಸಾಂಕ್ರಾಮಿಕ ರೋಗದಿಂದಾಗಿ ನೋಡಲು ಇನ್ನೇನು ಉಳಿದಿದೆ? ಅನ್ನೋ ಪ್ರಶ್ನೆ ಉದ್ಬವಿಸುತ್ತದೆ.

ಉತ್ತರ ಪ್ರದೇಶದಲ್ಲಿ ಜನರು ವಿವಾಹ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದಂತೆ ಮದುವೆ ಮೆರವಣಿಗೆಗಾಗಿ ವಸ್ತುಗಳನ್ನು ಮಾರಾಟ ಮಾಡುವ ಕೆಲವು ಅಂಗಡಿಗಳು ಕೊನೆಯ ವಿಧಿಗಳಿಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಇಡೀ ನಗರವು ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳಿಗೆ ಸಾಕ್ಷಿಯಾಗಿದೆ ಮತ್ತು ಹಳೆಯ ನಗರ ಪ್ರದೇಶ ಮತ್ತು ಚೌಕ್‌ಗೆ ಹೊಂದಿಕೊಂಡಿರುವ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ನನ್ನ ಕುಟುಂಬವು ಮದುವೆಯ ವಸ್ತುಗಳ ವ್ಯವಹಾರದಲ್ಲಿದ್ದರೂ, ನಾವು ಈಗ ಕೊನೆಯ ವಿಧಿಗಳಿಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ” ಎಂದು ಉತ್ತರ ಪ್ರದೇಶದ ಪ್ರಯಾಗರಾಜ್ನ ಚೌಕ್ ಪ್ರದೇಶದಲ್ಲಿ ಅಂಗಡಿ ನಡೆಸುತ್ತಿರುವ ಅಂಕಿತ್ ಅಗರ್ವಾಲ್ ಹೇಳಿದರು.

“ಈ ಪ್ರದೇಶದಲ್ಲಿ ಅಂತಹ ಅಂಗಡಿಗಳು ಇಲ್ಲದಿರುವುದರಿಂದ ಮತ್ತು ಗ್ರಾಹಕರು ಬೇರೆ ಬೇರೆ ಮಾರುಕಟ್ಟೆಗಳಿಗೆ ಹೋಗಬೇಕಾಗಿರುವುದರಿಂದ ಇದು ಜನರಿಗೆ ಸಹಾಯ ಮಾಡುತ್ತದೆ” ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೊಬ್ಬ ಸ್ಥಳೀಯರೊಬ್ಬರು ಮಾತನಾಡಿ, “ಈ ಎರಡು ಅಂಗಡಿಗಳನ್ನು ನಾವು ಹಲವಾರು ದಶಕಗಳಿಂದ ತಿಳಿದಿದ್ದೇವೆ ಮತ್ತು ಮದುವೆ ಸಮಾರಂಭಗಳಿಗೆ ಅಗತ್ಯವಿರುವ ಎಲ್ಲಾ ವಸ್ತುಗಳಿಗೆ ಅವು ‘ಒನ್-ಸ್ಟಾಪ್’ ಅಂಗಡಿ ಎಂದು ಪ್ರಸಿದ್ಧವಾಗಿವೆ. ಅದೇ ಅಂಗಡಿಗಳು ಈಗ ಕೊನೆಯ ವಿಧಿವಿಧಾನಗಳಿಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಿವೆ ” ಎಂದಿದ್ದಾರೆ.

ಈ ಮಹಾಮಾರಿ ಕೊರೊನಾ ಜನರನ್ನ ಅನ್ಯಾವ ಸ್ಥಿತಿಗೆ ತಂದು ನಿಲ್ಲಿಸುತ್ತೋ ಎಂಬ ಭಯ ಶುರುವಾಗಿದೆ. ಶುಭ ಸಮಾರಂಭಕ್ಕೆ ಬೇಕಾದ ವಸ್ತುಗಳ ಮಾರಾಟದಂಗಡಿಗಳು ಅಂತ್ಯಸಂಸ್ಕಾರಕ್ಕೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಿವೆ ಎಂದರೆ. ನಮ್ಮ ದೇಶದ ಪರಿಸ್ಥಿತಿ ಯಾವ ಹಂತಕ್ಕೆ ಬಂದು ತಲುಪಿದೆ ನೋಡಿ. ಇದು ನಿಜಕ್ಕೂ ನಮ್ಮ ದುರ್ದೈವವೇ ಸರಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights