ಬಿಜೆಪಿಯಲ್ಲಿ 3 ಬಣ; ಜಗದೀಶ್‌ ಶೆಟ್ಟರ್ ಸಿಎಂ ಮಾಡಲು ಲಾಬಿ ನಡೆಯುತ್ತಿದೆ: ಸತೀಶ್ ಜಾರಕಿಹೊಳಿ

ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬಂಡಾಯ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರೋ ಅತೃಪ್ತರೆನಿಸಿಕೊಂಡಿದ್ದವರ ಬಣದಿಂದಲೇ ಜಗದೀಶ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸರ್ಕಾರದಲ್ಲಿ ವಲಸಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿ ಶಾಸಕರು ಅಸಮಾಧನಗೊಂಡಿದ್ದಾರೆ. ಇದು ಬಿಜೆಪಿ ಆಂತರಿಕ ವಿಚಾರವಾಗಿದ್ದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಒಟ್ಟು ಮೂರು ಬಣಗಳು ಇವೆ. ಕಾಂಗ್ರೆಸ್​​ನಿಂದ ಬಿಜೆಪಿಗೆ ಹೋಗಿರುವವರ ಒಂದು ಗುಂಪು. ಸಂಘ ಪರಿವಾರದಿಂದ ಬಂದಿರುವ ಬಿಜೆಪಿ ಶಾಸಕರದ್ದು ಮತ್ತೊಂದು ಗುಂಪು, ಹಾಗೂ ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿರುವ ಶಾಸಕರ ಇನ್ನೊಂದು ಗುಂಪು ಇದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರುವ ಶಾಸಕರು ಜಗದೀಶ ಶೆಟ್ಟರ್ ಪರ ಲಾಬಿ ಮಾಡಲು ಮುಂದಾಗಿದ್ದಾರೆ. ಜಗದೀಶ ಶೆಟ್ಟರ್ ಸಿಎಂ ಆದ್ರೆ ಹೆಚ್ಚು ಲಾಭವಾಗುವ ನಿರೀಕ್ಷೆಯಲ್ಲಿ ಇದ್ದಾರೆ. ಬಿಜೆಪಿಗೆ ಹೋಗಿರುವ ಎಲ್ಲರೂ ಸ್ವಂತ ಲಾಭಕ್ಕಾಗಿ ಹೋಗಿದ್ದಾರೆ. ಯಾವುದೇ ಪಕ್ಷದ ಸಂಘಟನೆ, ರಾಜ್ಯ ಅಭಿವೃದ್ಧಿ ಅವರಿಗೆ ಮುಖ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಇನ್ನೂ 5 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಿತ್ತೇನೆ ಎಂದ್ದಿದ್ದರ  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಕಾಂಗ್ರೆಸ್​ನಿಂದ ಯಾರೊಬ್ಬರೂ ಬಿಜೆಪಿಗೆ ಹೋಗಲ್ಲ. ಈಗ ಎಲ್ಲ ಸಚಿವ ಸ್ಥಾನಗಳು ಭರ್ತಿಯಾಗಿದ್ದು, ಬಂದವರಿಗೆ ಏನ್ ಕೊಡ್ತಾರೆ? ಕೇವಲ ಶಾಸಕರಾಗಿ ಉಳಿಯೋಕೆ ಬಿಜೆಪಿಗೆ ಏಕೆ ಹೋಗಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ.

ಕಾಂಗ್ರೆಸ್​ನಿಂದ ಯಾವುದೇ ಆಪರೇಷನ್ ನಡೆಸಲ್ಲ. ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights