ಆಸ್ಪತ್ರೆ ಅವ್ಯವಸ್ಥೆ ಕಂಡು ಕೋವಿಡ್ ಸೋಂಕಿತ ನ್ಯಾಯಾಧೀಶರು ಶಾಕ್ : ದೂರು ದಾಖಲು!
ಕೋವಿಡ್ ಸೋಂಕಿತ ನ್ಯಾಯಾಧೀಶರು ಆಸ್ಪತ್ರೆಗೆ ದಾಖಲಾದ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ಶಾಕ್ ಆದ ಘಟನೆ ಯುಪಿಯ ಕಾನ್ಪುರದಲ್ಲಿ ನಡೆದಿದೆ.
ಭಾನುವಾರ ಕೊವಿಡ್ ಸೋಂಕಿಗೆ ಒಳಗಾಗಿದ್ದ ಕಾನ್ಪುರದ ಜಿಲ್ಲಾ ನ್ಯಾಯಾಧೀಶ ಆರ್.ಪಿ.ಸಿಂಗ್, ಬುಧವಾರ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಮ್ಒ) ಅನಿಲ್ ಮಿಶ್ರಾ ಅವರೊಂದಿಗೆ ನಾರೈನಾ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯ ಅಸ್ವಸ್ಥತೆಯನ್ನು ನೋಡಿ ಇಬ್ಬರೂ ಬೆರಗಾಗಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ವೈದ್ಯರಿಲ್ಲ, ವೈದ್ಯಕೀಯ ಸಿಬ್ಬಂದಿಗಳಿಲ್ಲದೇ ಇರುವುದನ್ನು ನೋಡಿದ್ದಾರೆ.
ಹೀಗಾಗಿ ಕಾನ್ಪುರದ ಆಸ್ಪತ್ರೆಯಲ್ಲಿ ಕಂಡುಬಂದ ಸೌಲಭ್ಯಗಳ ಕೊರತೆ ಮತ್ತು ನಿರ್ಲಕ್ಷ್ಯದ ಬಗ್ಗೆ ಆಸ್ಪತ್ರೆಯ ವ್ಯವಸ್ಥಾಪಕ ಅಮಿತ್ ನರೈನ್ ಅವರಿಗೆ ಮಾಹಿತಿ ನೀಡಿ ಸಿಎಂಒ ಪೊಲೀಸರಿಗೆ ದೂರು ನೀಡಿದ್ದರು.
ಮಾತ್ರವಲ್ಲದೇ ಸೋಂಕಿತ ನ್ಯಾಯಾಧೀಶರನ್ನು ಮೇಲಿನ ಮಹಡಿಗೆ ಕರೆದೊಯ್ಯುವಾಗ ಲಿಫ್ಟ್ ಕೆಲ ಹೊತ್ತು ಕೆಟ್ಟು ನಿಂತಿದೆ ಎಂದು ದೂರಲಾಗಿದೆ. ಅವರು ಲಿಫ್ಟ್‌ನಿಂದ ಹೊರಬಂದ ನಂತರ, ಕೋವಿಡ್ -19 ರೋಗಿಗಳನ್ನು ನೋಡಿಕೊಳ್ಳಲು ವೈದ್ಯರು ಇರಲಿಲ್ಲ ಮತ್ತು ಸಿಂಗ್‌ಗೆ ಹಾಜರಾಗಲು ಯಾವುದೇ ತಜ್ಞರೂ ಇರಲಿಲ್ಲ ಎಂದು ಮಿಶ್ರಾ ಆರೋಪಿಸಿದರು.
ನ್ಯಾಯಾಧೀಶರು ತಕ್ಷಣವೇ ಮುಖ್ಯ ವೈದ್ಯಕೀಯ ಅಧಿಕಾರಿಗೆ ನಿರ್ಲಕ್ಷ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದರು. ಸಿಎಂಒ ಪಂಕಿ ಪೊಲೀಸ್ ಠಾಣೆಗೆ ತೆರಳಿ ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಿದ್ದಾರೆ.
ಕಾನ್ಪುರ ಪೊಲೀಸ್ ಆಯುಕ್ತ ಅಸಿಮ್ ಅರುಣ್, “ನಾರೈನಾ ವೈದ್ಯಕೀಯ ಕಾಲೇಜಿನ ವ್ಯವಸ್ಥಾಪಕ ಅಮಿತ್ ನರೈನ್, ವೈದ್ಯರು ಮತ್ತು ಸಿಬ್ಬಂದಿ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಹೇಳಿದರು.
ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಅಧಿನಿಯಮ, 2020 ರ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗಿದೆ.